ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ನನ್ನ ಪರಮೇಷ್ಠಿ ಗುರುಗಳಾದ ಶ್ರೀ ಚಿದಾನಂದ ನಾಥರು ಶೃಂಗೇರೀ ಶಾರದಾ

ಪೀಠದ ಅಂದಿನ ಪೀಠಾಧಿಪತಿಗಳಾಗಿದ್ದ ಜಗದ್ಗುರು ಮೂರನೇ ಚಂದ್ರಶೇಖರ ಭಾರತೀ ಸ್ವಾಮಿಗಳ ಆಶೀರ್ವಾದ ಪಡೆಯಲು ಅವರನ್ನು  ಭೇಟಿಯಾದಾಗ ಶ್ರೀಗಳು ಚಿದಾನಂದನಾಥರಿಗೆ ಶ್ರೀ ಉಚ್ಛಿಷ್ಠ ಮಹಾಗಣಪತಿಯ ಸಹಸ್ರನಾಮವನ್ನು ಹೇಳುವಂತೆ ಅಪ್ಪಣೆ ಮಾಡುತ್ತಾರೆ. ಈ ಸಹಸ್ರನಾಮವನ್ನು ಅತ್ಯಂತ ಗೌಪ್ಯವಾಗಿ ಕಾಪಾಡಿಕೊಳ್ಳುವಂತೆ  ಅವರ ಶ್ರೀ ವಿದ್ಯಾ ಗುರು ಶ್ರೀ ಗುಹಾನಂದನಾಥರಿಂದ ಆದೇಶಹೊಂದಿದ್ದ ನನ್ನ ಪರಮೇಷ್ಠಿ ಗುರುಗಳು ಆ ವಿಷಯವನ್ನು ಜಗದ್ಗುರುಗಳ ಮುಂದೆ ಅತ್ಯಂತ ವಿನಯದಿಂದ ಬಿನ್ನವಿಸುತ್ತಾರೆ. ಆಗ ಜಗದ್ಗುರುಗಳು, ಶ್ರೀ ಗುಹಾನಂದನಾಥರಿಗೂ, ತಮಗೂ, ಮತ್ತು ಶ್ರೀ ಚಿದಾನಂದನಾಥರಿಗೂ ಯಾವುದೇ ವ್ಯತ್ಯಾಸ ಅಥವಾ ಭೇದವಿಲ್ಲ ಎಂಬುದನ್ನು ತಿಳಿಸಿ,

ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕದ ಬಗ್ಗೆ ಶ್ರೀ ಚಿದಾನಂದನಾಥರ ಗಮನ ಸೆಳೆಯುತ್ತಾರೆ.

ಇಂತಹ ಒಂದು ಅಪೂರ್ವ ಘಟನೆಯ ಬಗ್ಗೆ ಓದಿದ್ದು  ನನ್ನ ನೆನಪಿಗೆ ಬಂದದ್ದಕ್ಕಾಗಿಯೇ, ನಾನು ಮನೀಷಾ ಪಂಚಕದ ಬಗ್ಗೆ ವಿಷಯ ಸಂಗ್ರಹಿಸಿ ಇಲ್ಲಿ ಪ್ರಸ್ತುತ ಪಡಿಸಲು ಕಾರಣವಾಯಿತು..   

ಈ ನೆನಪನ್ನು ನನಗೆ ತಂದುಕೊಟ್ಟಿದ್ದು, ಆ ಮೂಲಕ ನಾನು ಮನೀಷಾ ಪಂಚಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಮತ್ತು ತಿಳಿದದ್ದನ್ನು ಹಂಚಿಕೊಳ್ಳಬೇಕು ಎಂಬ ಇಚ್ಚೆ ನನಗೆ ಆಗಿದ್ದು, ಇದೆಲ್ಲವೂ ನನ್ನ ಗುರುಗಳ ಆದೇಶದಿಂದಲೇ ಎಂದು ನಾನು ಭಾವಿಸಿದ್ದೇನೆ. ಮನೀಷಾ ಪಂಚಕದಲ್ಲಿ ಶ್ರೀ ಭಗವತ್ಪಾದರು ಹೇಳಿರುವ ವಿಷಯಗಳು ಅತ್ಯಂತ ಗಹನವಾದ ವಿಷಯಗಳಾಗಿದ್ದು ಅವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಯೋಗ್ಯತೆ, ಅರ್ಹತೆ ನನಗಿಲ್ಲವಾದರೂ, ಗುರುಗಳ ಆದೇಶವನ್ನು ಕಾಯಾ ವಾಚಾ ಮನಸಾ ಪಾಲಿಸುವ ಪ್ರಯತ್ನವನ್ನು ಮಾತ್ರ ಮಾಡಿದ್ದೇನೆ. ಇದರ ತಪ್ಪು ಒಪ್ಪುಗಳೆಲ್ಲವನ್ನೂ ಗುರುಗಳ, ಗುರುಮಂಡಲದ ಪಾದಕಮಲಗಳಿಗೆ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಅರ್ಪಿಸುತ್ತಿದ್ದೇನೆ. ಮನೀಷಾ ಪಂಚಕವನ್ನು ಅರ್ಥಮಾಡಿಕೊಳ್ಳಲು ವಿಷಯ ಸಂಗ್ರಹಣೆಗೆ ಹೊರಟ ನನಗೆ ನನ್ನ ಗುರುಗಳು ಈ ಕಳೆದ ಹತ್ತು ಹನ್ನೆರಡು ದಿನಗಳಲ್ಲಿ ಹೇಗೆ ಮಾರ್ಗದರ್ಶನ ನೀಡಿದರು ಮತ್ತು ನಾನು ಅರ್ಥಮಾಡಿಕೊಂಡದ್ದು ತಪ್ಪಾದಾಗ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಹೇಗೆ ಹಾದಿ ತೋರಿಸಿದರು ಎನ್ನುವುದನ್ನು ನೆನೆಸಿಕೊಂಡರೆ ಮೈ ರೋಮಾಂಚನ ವಾಗುತ್ತದೆ.

ಶ್ರೀ ಭಗವತ್ಪಾದರ ಜೀವನದಲ್ಲಿ ಬಂದು ಹೋದ ಒಂದು ಅನಿರೀಕ್ಷಿತ ಘಟನೆಯ ಫಲವೇ  ಮನೀಷಾ ಪಂಚಕದ ರಚನೆಗೆ ಕಾರಣವಾಯಿತಷ್ಟೇ ಅಲ್ಲದೆ, ವರ್ಣ, ಜಾತಿ, ಧರ್ಮ, ಕುಲ, ಮೇಲು,ಕೀಳು ಎಂಬ ಅನಿಷ್ಟ ರೋಗದಿಂದ ಕಣ್ಮುಚ್ಚಿ ಹೋಗಿರುವ ನಮ್ಮ ಕಣ್ಣುಗಳನ್ನು  ಸಹಾ ತೆರೆಸಿದೆ ಮತ್ತು ತೆರೆಸುತ್ತಿದೆ.

ಭಗವತ್ಪಾದರು ವಾರಣಾಸಿಯ ಗಂಗಾ ನದಿಯಲ್ಲಿ ಸ್ನಾನ ಮುಗಿಸಿ ತಮ್ಮ ಶಿಷ್ಯರೊಂದಿಗೆ ತಮ್ಮ ಕುಟೀರಕ್ಕೆ ವಾಪಸಾಗುತ್ತಿರುವಾಗ ಇವರ ಮುಂದೆ, ಹಾದಿಯ ಮಧ್ಯದಲ್ಲಿ ಸ್ಮಶಾನ ಕಾಯುವ ವೃತ್ತಿ ಯನ್ನು ಮಾಡುತ್ತಿರುವ ವ್ಯಕ್ತಿ ಅಡ್ಡಬರುತ್ತಾನೆ. ಭಗವತ್ಪಾದರ ಶಿಷ್ಯರು ಮತ್ತು ಭಗವತ್ಪಾದರು ಈ ವ್ಯಕ್ತಿಯನ್ನು ಪಕ್ಕಕ್ಕೆ ಸರಿ, ದೂರ ಹೋಗು ಎಂದು ಗದರಿಸುತ್ತಾರೆ. ಸ್ಮಶಾನ ಕಾಯುವ ವ್ಯಕ್ತಿಯನ್ನು  ಎಲ್ಲಕಡೆ, ಮನೀಷಾ ಪಂಚಕದ ಮೊದಲನೇ ಶ್ಲೋಕವೂ ಸೇರಿದಂತೆ  ಚಾಂಡಾಲ ಎಂದೇ ಸಂಭೋದಿಸಲಾಗಿದೆ.  

ಪಕ್ಕಕ್ಕೆ ಸರಿ, ದೂರ ಹೋಗು ಎಂಬುದನ್ನು ಕೇಳಿದ ಆ ಸ್ಮಶಾನ ಕಾಯುವ ವ್ಯಕ್ತಿ ಭಗವತ್ಪಾದರನ್ನು ಅಪಹಾಸ್ಯ ಮಾಡಿ ಅವರನ್ನೇ ಹಲವು ಪ್ರಶ್ನೆಗಳನ್ನು ಕೇಳುತ್ತಾನೆ. ಆತನು ಕೇಳಿದ ಪ್ರಶ್ನೆಗಳು ಇಲ್ಲಿ ಮೊದಲ ಭಾಗದ 2 ಶ್ಲೋಕಗಳಾದರೆ ಅದಕ್ಕೆ ಭಗವತ್ಪಾದರು ನೀಡಿದ ಉತ್ತರವೇ ಎರಡನೇ ಭಾಗದ ಐದು ಶ್ಲೋಕಗಳು ಮನೀಷಾ ಪಂಚಕ ಎನಿಸಿಕೊಂಡಿವೆ. ಮನೀಷಾ ಎನ್ನುವ ಪದಕ್ಕೆ ಹಲವಾರು ಅರ್ಥಗಳಿದ್ದರೂ ವಿವೇಕ ಎನ್ನುವ ಅರ್ಥ ಬಹಳ ಸೂಕ್ತ ಎನಿಸುತ್ತದೆ. ಪಂಚಕ ಎಂದರೆ ಐದು ಅಂಕೆಗೆ ಸಂಬಂಧಿಸಿದ್ದು, ಐದು ಆಗಿರವುದು. ಮನೀಷಾ ಪಂಚಕ ಎಂದರೆ ವಿವೇಕವನ್ನು ಹೇಳುವ ಐದು ಸೂಕ್ತಗಳು ಎಂದು ಹೇಳಬಹುದು ಎನಿಸುತ್ತದೆ.

 ಚಿನ್ಮಯಾನಂದ ಮಿಷನ್ ನ ಸ್ವಾಮಿ ತೇಜೋಮಯಾನಂದರು  ಮನೀಷಾ ಪಂಚಕವನ್ನು “ Conviction of the wise”  ಅಂದರೆ ವಿವೇಕವಂತನ ಅಚಲವಾದ ನಂಬಿಕೆ ಎಂದು ಕರೆದಿದ್ದಾರೆ.

ಈ ಸ್ಮಶಾನ ಕಾಯುವ ವ್ಯಕ್ತಿಯ ಪ್ರಶ್ನೆಗಳು ಭಗವತ್ಪಾದರನ್ನು ಚುಚ್ಚುವ ವಿಡಂಬನೆ ಯಾಗಿತ್ತು ಎನ್ನುತ್ತಾರೆ ಸ್ವಾಮಿ ತೇಜೋಮಯಾನಂದರು. ಆ ವ್ಯಕ್ತಿಯು ಭಗವತ್ಪಾದರನ್ನು ಬಡಿದೆಬ್ಬಿಸುವ ಒಂದು ಸಿಡಿಗುಂಡನ್ನೇ ಸಿಡಿಸಿದ್ದ. ಎಂಟನೇ ಶತಮಾನದ ಮಧ್ಯಭಾಗದಲ್ಲಿ ಸಮಾಜವು ಜಾತಿಗಳ ಹೆಸರಿನಲ್ಲಿ  ಒಡೆದು ಹೋಗಿತ್ತು, ಅಸಹಿಷ್ಣತೆ ತಾಂಡವವಾಡುವ ಮೂಲಕ ಭಾರತದ ಪರಂಪರೆಯನ್ನು ಕಾಂತಿಹೀನಗೊಳಿಸುವ ಭೀತಿಯನ್ನುಂಟುಮಾಡಿತ್ತು. ಆ ದಿನಗಳು ಭಾರತದ ಇತಿಹಾಸದ ದುಃಖಪೂರಿತ ಪುಟಗಳಲ್ಲಿ ಸೇರಿಹೋದ ದಿವಸಗಳು  ಎನ್ನುತ್ತಾರೆ ಅವರು.  

 ಈ ಅಸಮಾನತೆ ಮತ್ತಷ್ಟು ಅತಿಯಾಗಿ ಭರತಭೂಮಿಯನ್ನು   ವ್ಯಾಪಿಸಿದಾಗ ಆಯಾಯ ಪ್ರಾಂತಗಳ ಮಟ್ಟಿಗೆ ಅಸಮಾನತೆಯ ವಿರುದ್ಧ ಕ್ರಾಂತಿಗಳೇ ಆರಂಭವಾದುವು. ಅಂತಹ ಒಂದು ಕ್ರಾಂತಿ ಈಗ ಕರ್ನಾಟಕದ ಭಾಗವಾಗಿರುವ ಬಸವಕಲ್ಯಾಣದಲ್ಲೂ 12 ನೆಯ ಶತಮಾನದಲ್ಲಿ ಆಗಿದ್ದು ನಮಗೆಲ್ಲಾ ತಿಳಿದೇ ಇದೆ.

ಶ್ರೀ ಬಸವಣ್ಣನವರು ತಮ್ಮ ಒಂದು ವಚನದಲ್ಲಿ “ಚಾಂಡಾಲ ವಾಟಿಕಾಯಾಂ ವಾ ಶಿವಭಕ್ತಃ ಸ್ಥಿತೋಃ ಯದಿ ತಚ್ಛ್ಪ್ರೇಣಿಃ ಶಿವಲೋಕಃ ಸ್ವಾತ್ ಸದ್ಗೃಹಂ ಶಿವಮಂದಿರಂ” ಎನ್ನುವ ಶ್ಲೋಕವನ್ನು ಉಲ್ಲೇಖಿಸುತ್ತಾರೆ. ಚಾಂಡಾಲರು ಎಂದು ನಾವು ಕರೆಯುವವರು ವಾಸಿಸುವ ಸ್ಥಳದಲ್ಲಿ ಒಬ್ಬ ಶಿವಭಕ್ತ ಇದ್ದರೆ ಅದು ಶಿವಲೋಕವೇ ಆಗುತ್ತದೆ ಮತ್ತು ಆ ಮನೆಯೇ ಶಿವಮಂದಿರ ಎನ್ನುವುದು ಇದರ ಭಾವಾರ್ಥ.

ಹಾಗೆಯೇ ತಮ್ಮ ಇನ್ನೊಂದು ವಚನದಲ್ಲಿ, 

ವ್ಯಾಸ ಬೋಯಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ, ಮಂಡೋದರಿ ಕಪ್ಪೆಯ ಮಗಳು, ಅಗಸ್ತ್ಯ ಕಬ್ಬಿಲ, ದೂರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ, ಕೌಂಡಿನ್ಯ ಋಷಿ ನಾವಿದ, ಆದರೇನು ಅವರೆಲ್ಲರೂ ಪೂಜನೀಯರೇ ಆಗಿದ್ದಾರೆ ಎಂದು ಹೇಳುತ್ತಾ, ಜಾತಿ, ವೃತ್ತಿ, ವರ್ಣ ಇವು ಯಾವುವೂ ಮಾನವರಲ್ಲಿ ಅಸಮಾನತೆ ತರುವಂತಹುವಲ್ಲಾ  ಎಂದು ಪ್ರತಿಪಾದಿಸಿದ್ದಾರೆ. ಇವೆಲ್ಲವೂ ಪುಸ್ತಕದಲ್ಲಿ, ಉಪನ್ಯಾಸಗಳಿಗೆ ಸೀಮಿತವಾಗಿ ಆಚರಣೆಯಲ್ಲಿ ಬರದೇ ಇರುವುದು ನಮ್ಮ ದೌರ್ಭಾಗ್ಯವಲ್ಲದೆ ಬೇರೇನೂ ಅಲ್ಲಾ.  ಉತ್ತಮ ಕುಲ ಎಂದು ನಾವು ಭಾವಿಸುವ ಕುಲದಲ್ಲಿ ಹುಟ್ಟಿ ಅಧಮ ನಡತೆಯುಳ್ಳವರನ್ನೂ, ಕೀಳು ಕುಲ ಎಂದು ನಾವು ಭಾವಿಸುವ ಕುಲದಲ್ಲಿ ಹುಟ್ಟಿ ಅತ್ಯುತ್ತಮ ನಡತೆಯನ್ನು ರೂಪಿಸಿಕೊಂಡಿರುವವರನ್ನೂ ನಾವು ಈ ಸಮಾಜದಲ್ಲಿ ಕಾಣುತ್ತಿದ್ದರೂ, ಎಲ್ಲಾ ಅಣು ರೇಣು ತೃಣ ಕಾಷ್ಟಗಳಲ್ಲಿ ಬೆಳಗುತ್ತಿರುವ ಆತ್ಮ ಒಂದೇ ಎಂದು ತಿಳಿದಿದ್ದರೂ ಅದನ್ನು ವಾಸ್ತವವಾಗಿ ನಿಜಜೀವನದಲ್ಲಿ ರೂಢಿಸಿಕೊಳ್ಳಲು ಏಕೆ ಆಗುತ್ತಿಲ್ಲಾ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲಾ.

ಈಗಂತೂ ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುತ್ತಿರುವ, ಧರ್ಮ ಧರ್ಮಗಳ ನಡುವಿನ ತಿಕ್ಕಾಟ, ಜಾತಿಯಾಧಾರಿತ ರಾಜಕಾರಣ ಇವುಗಳನ್ನು ನೋಡಿ ಶಂಕರ ಭಗವತ್ಪಾದರು ಏನೆನ್ನುತ್ತಿದ್ದರೋ,  ಬಸವಣ್ಣನವರು ಏನೆನ್ನುತ್ತಿದ್ದರೋ ಊಹಿಸಲೂ ಅಸಾಧ್ಯ ಆಗಿದೆ.  

 ವಾರಣಾಸಿಯಲ್ಲಿ ಶ್ರೀ ಶಂಕರ ಭಗವತ್ಪಾದರ ಹಾದಿಗೆ ಅಡ್ಡಲಾಗಿ ಬಂದ ಚಾಂಡಾಲ ( ಈ ಪದ ವನ್ನು ಉಪಯೋಗಿಸಲು ನನ್ನ ಮನಸಿಗೆ ಕಸಿವಿಸಿ ಯಾಗುತ್ತಿದೆ ಆದರೂ ಈ ಸಂದರ್ಭದಲ್ಲಿ ಈ ಪದವನ್ನು ಉಪಯೋಗಿಸಲೇ ಬೇಕಾದ ಅನಿವಾರ್ಯತೆ ಇದೆ) ಶಂಕರರನ್ನು ಪ್ರಶ್ನೆ ಮಾಡುತ್ತಾನೆ;

ಅನ್ನಮಯಾದನ್ನಮಯಮಥ್ವಾ ಚೈತನ್ಯೇವ ಚೈತನ್ಯಾತ್

ಯತಿವರ ದೂರೀಕರ್ತುಮ್ ವಾಚ್ಛಸಿ ಕಿಂ ಬ್ರೂಹಿ ಗಚ್ಛೇತಿ        ೧

ಅನ್ನಮಯವಾದ ಈ ಶರೀರವನ್ನು ದೂರ ಹೋಗು ಅಥ್ವಾ ಪಕ್ಕಕ್ಕೆ ಸರಿ ಎನ್ನುತ್ತಿದ್ದೀರೋ ಅಥ್ವಾ ಈ ಅನ್ನಮಯ ಶರೀರದಲ್ಲಿರುವ ಚೈತನ್ಯವನ್ನು ದೂರ ಹೋಗು ಅಥವಾ ಪಕ್ಕಕ್ಕೆ ಸರಿ ಎಂದು  ತಾವು ಯತಿವರ್ಯರು ಹೇಳುತ್ತಿದ್ದೀರೂ ದಯಮಾಡಿ ತಿಳಿಸಿ.

ಇಲ್ಲಿ ಕೊಂಚ ವಿವರಣೆ ಬೇಕೆನಿಸುತ್ತದೆ.

 ದೂರ ಸರಿಯಬೇಕಾದ್ದು ಬೌತಿಕ ಶರೀರ ಎಂದು ಭಾವಿಸಿದರೆ, ಒಂದು  ವಸ್ತುವಿನ ದ್ರವ್ಯರಾಶಿ ಯನ್ನು ಮತ್ತೊಂದು ವಸ್ತುವಿನ ದ್ರವ್ಯರಾಶಿಯಿಂದ ಬೇರ್ಪಡಿಸುವುದು.(Separating the mass of one physical object by the mass of the other physical object) ವಸ್ತು ಎನ್ನುವುದೇ ಸತ್ಯವಲ್ಲ, ಎಂದು ತತ್ವಜ್ನಾನಿಗಳು ಹೇಳುವಾಗ, ಈ ಸತ್ಯವಲ್ಲದ್ದಕ್ಕೆ ಏಕೆ ಈ ಪ್ರಾಮುಖ್ಯತೆ?  

ದೂರ ಸರಿ, ಪಕ್ಕಕ್ಕೆ ಸರಿ ಎನ್ನುವುದು ಚೈತನ್ಯಕ್ಕೆ ಎನ್ನುವುದಾದರೆ, ಇದಕ್ಕಿಂತ ಅಸಂಬದ್ಧವಾದ್ದು ಇನ್ನೊಂದು ಇರಲು ಸಾಧ್ಯವಿಲ್ಲಾ. ಚೈತನ್ಯ ಎನ್ನುವುದು ಅನಂತವಾದ್ದು, ಮಿತಿಯಿಲ್ಲದ್ದು, ಕಾಲ ದೇಶಗಳನ್ನು ಮೀರಿದ್ದು.

ದೇಹ, ಜ್ನಾನೇಂದ್ರಿಯಗಳು, ಮನಸ್ಸು, ಬುದ್ಧಿ ಇವು ನಿಜವಾದ ಚಾಂಡಾಲರು. ಇವು ನಂಬಿಕೆಗೆ ಅನರ್ಹವಾದವುಗಳು. ನಮಗೆ ನಿಜವಾದ ಆತ್ಮಜ್ನಾನ ದೊರೆಯಬೇಕಾದರೆ ಈ ಚಂಡಾಲರನ್ನು ನಾವು ದೂರ ಸರಿಸಬೇಕು.

ಚಾಂಡಾಲನು ಕೇಳಿದ ಈ ಮೊದಲ ಪ್ರಶ್ನೆ ನೇರವಾಗಿಯೂ ಒರಟಾಗಿಯೂ ಇದ್ದು ಇನ್ನು ಮುಂದಿನ ಪ್ರಶ್ನೆ ಶಿಷ್ಟಾಚಾರದಿಂದ ಕೂಡಿದ್ದರೂ ಆ ಕಾಲದ ಸಮಾಜದಲ್ಲಿನ ಅಸಮಾನತೆಯನ್ನು ಸ್ಪಷ್ಟವಾಗಿ ಹೇಳುತ್ತದೆ.

 ಅಸಮಾನತೆ ಎನ್ನುವುದು ಮನಸಿನ ಕಲ್ಮಶ. ಅದನ್ನು ತೊಳೆಯುವ ಕಾರ್ಯ ಇನ್ನೂ ಆಗಿಲ್ಲಾ. ಕಾನೂನಿನ ಭೀತಿಯಿಂದ ತೋರುವ ಸಮಾನತೆ ಕೇವಲ ತೋರಿಕೆಯದ್ದೇ ಹೊರತು ಕಾಯಾ ವಾಚಾ ಮನಸಾ ಅಂತೂ ಅಲ್ಲವೇ ಅಲ್ಲಾ. ಬ್ರಹ್ಮಜ್ನಾನವನ್ನೇ ನೀಡಬೇಕಾದ  ಅಂದರೆ ಬ್ರಹ್ಮಾಂಡದ ನಿಜ ಸ್ವರೂಪವನ್ನು ಸಮಾಜಕ್ಕೆ ತೋರಬೇಕಾದ ಮಠ ಮಾನ್ಯಗಳೂ ಅದನ್ನೇ ಮಾಡುತ್ತಿವೆ. ಇನ್ನೊಂದು ಕಡೆ ಸಮಾನತೆಯ ಹೆಸರಿನಲ್ಲಿ ಜಾತಿಗೊಂದರಂತೆ ಮಠ ಮಾನ್ಯಗಳು ಹುಟ್ಟಿಕೊಂಡು ಸಮಾನತೆಯ ಅಥವಾ ಎಲ್ಲವೂ ಎಲ್ಲರೂ ಒಂದೇ ಎಂಬ ಪ್ರಕೃತಿಯ ನಿಯಮಕ್ಕೇ ಘಾತಿಯನ್ನುಂಟು ಮಾಡುತ್ತಿವೆ ಎಂದು ಹೇಳಲು ಅತ್ಯಂತ ದುಃಖ ವಾಗುತ್ತಿದೆ.

 ನಮಗೆ ಈಗ ಅತ್ಯವಶ್ಯವಾಗಿ ಬೇಕಾಗಿರುವುದು, ಸಾಮಾಜಿಕ ಕೇಂದ್ರಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳೇ ಹೊರತು ಧಾರ್ಮಿಕ ಕೇಂದ್ರಗಳಲ್ಲಾ ಎಂಬ ನನ್ನ ಈ ಮಾತು ಇಂದಿನ ಸಮಾಜಕ್ಕೆ ಕಹಿ ಎನಿಸಬಹುದಾದರೂ ಅದು ಸತ್ಯ. ಈ ಸತ್ಯವನ್ನು ಆದಷ್ಟು ಪ್ರಿಯವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ.

ಇನ್ನು ಚಾಂಡಾಲನ ಎರಡನೇ ಪ್ರಶ್ನೆಯನ್ನು ನೋಡೋಣ:

ಕಿಂ ಗಂಗಾಬುನಿ ಬಿಂಬಿತೇsಮ್ಬರಮಣ್ಯೌ ಚಾಂಡಾಲವಿಥೀಪಯಃ

ಪೂರೇ ವಾsನ್ತರಮಸ್ತಿ ಕಾಂಚನಘಟೀಮೃತ್ಕುಂಭಯೋರ್ವಾsಮ್ಬರೇ

ಪ್ರತ್ಯಗ್ವಸ್ತುನಿ  ನಿಸ್ತರಂಗ ಸಹಜಾನಂದಾವಬೋಧಾಂಬುಧೌ

ವಿಪ್ರೋsಯಂ ಶ್ವಪಚೋsಯಮಿತ್ಯಾಪಿ ಮಹಾನ್ಕೋsಯಂ ವಿಭೇದಭ್ರಮಃ  ೨

ಕಿಂ ಗಂಗಾಬುನಿ ಬಿಂಬಿತೇsಮ್ಬರಮಣ್ಯೌ ಚಾಂಡಾಲವಿಥೀಪಯಃ

, ಆಕಾಶದ ರತ್ನ ವಾದ  ಸೂರ್ಯನನ್ನು ಗಂಗಾನದಿಯ ಜಲ ಹೇಗೆ  ಪ್ರತಿಬಿಂಬಿಸುತ್ತಿದೆಯೋ ಅದೇ ಸೂರ್ಯನನ್ನು   ಚಂಡಾಲನ ಗುಡಿಸಿಲಿನ ಹೊರಗಡೆಯ ಹಳ್ಳದಲ್ಲಿನ ನೀರಿನಲ್ಲಿಯೂ ಪ್ರತಿಬಿಂಬಿಸುತ್ತಿದೆ.

ಪೂರೇ ವಾsನ್ತರಮಸ್ತಿ ಕಾಂಚನಘಟೀಮೃತ್ಕುಂಭಯೋರ್ವಾsಮ್ಬರೇ

ಸೂರ್ಯನ ಬೆಳಕು ಮಣ್ಣಿನ ಮಡಕೆಯಲ್ಲಿಯೂ ಪ್ರಕಾಶಿಸುತ್ತದೆ, ಚಿನ್ನದ ಬಿಂದಿಗೆಯಲ್ಲಿಯೂ ಪ್ರಕಾಶಿಸುತ್ತದೆ. ಆ ಪ್ರಕಾಶವು ಬೇರೆ ಬೇರೆ ಆಗಿದೆಯೇನು?

ಪ್ರತ್ಯಗ್ವಸ್ತುನಿ  ನಿಸ್ತರಂಗ ಸಹಜಾನಂದಾವಬೋಧಾಂಬುಧೌ

ಯಾರು ತನ್ನೊಳಗಿನ ಆತ್ಮ ಎಂಬ ಸ್ವಾಭಾವಿಕ ಪ್ರಜ್ನೆಯ ಆತ್ಮಾನಂದವೆಂಬ  ಸಾಗರದಲ್ಲಿ ಮುಳುಗಿಹೋಗಿ ಯೋಚನೆಯೇ ಇಲ್ಲದವನಾಗಿದ್ದಾನೋ, ಅಂದರೆ ಶೂನ್ಯ ಸ್ಥಿತಿಯನ್ನು ತಲುಪಿದ್ದಾನೋ, 

ವಿಪ್ರೋsಯಂ ಶ್ವಪಚೋsಯಮಿತ್ಯಾಪಿ ಮಹಾನ್ಕೋsಯಂ ವಿಭೇದಭ್ರಮಃ

ಅಂತಹವನು, ಇವನು ಬ್ರಾಹ್ಮಣ, ಇವನು ಚಾಂಡಾಲ, ಎನ್ನುವ ಭ್ರಮೆಯ ಬೇಧಭಾವ ಮಾಡುವಷ್ಟು ಸಣ್ಣತನವನ್ನು ತೋರಿಸಲು ಸಾಧ್ಯವೇ? ಇದು ಚಾಂಡಾಲನ ಎರಡನೇ ಪ್ರಶ್ನೆ.

.

ಇಲ್ಲಿ ಸಹಾ ಪಟ್ಟಬದ್ಧ ಹಿತಾಸಕ್ತಿಗಳು ಈ ಚಾಂಡಾಲನನ್ನು ಶಿವನು ಚಾಂಡಾಲನ ರೂಪಧರಿಸಿ ಶಂಕರರನ್ನು ಪರೀಕ್ಷಿಸಿದ ಎಂದು ಹೇಳಲು ಇನ್ನೂ ಎರಡು ಶ್ಲೋಕಗಳನ್ನು ಸೇರಿಸುತ್ತಾರೆ. ಅಂದರೆ ಚಾಂಡಾಲನಾಗಿ ಹುಟ್ಟಿದವನಿಗೆ ಇಂತಹ ಜ್ನಾನ ಇರಲು ಸಾಧ್ಯವಿಲ್ಲಾ ಎಂದು ಬಿಂಬಿಸುವ ಪ್ರಯತ್ನಮಾಡಲಾಗಿದೆ. ಎಲ್ಲರೂ ಶಿವಸ್ವರೂಪವೇ ಎನ್ನುವುದೇ ವೇದ ಗಳಸಾರ ಎಂಬುದನ್ನು ಈ ಪಟ್ಟಬದ್ಧ ಹಿತಾಸಕ್ತಿಗಳು ಮರೆತು ಹೋಗಿದ್ದರು ಮತ್ತು ಮರೆತು ಹೋಗಿದ್ದಾರೆ ಎನ್ನುವುದು ವಿಷಾದ ಪಡುವಂತಹ  ಸಂಗತಿ.

ಚಾಂಡಾಲನ ಈ ಎರಡು ಪ್ರಶ್ನೆಗಳಿಗೆ ಶ್ರೀ ಶಂಕರ ಭಗವತ್ಪಾದರು ನೀಡುವ ಉತ್ತರವೇ ಮನೀಷಾ ಪಂಚಕ.

ಮನೀಷಾ ಪಂಚಕಂ

ಜಾಗ್ರತ್ಸ್ವಪ್ನಸುಷುಪ್ತಿಷು   ಸ್ಪುಟತರಾ ಯಾ ಸಂವಿದುಜ್ಜೃಂಭತೇ

ಯಾ ಬ್ರಹ್ಮಾದಿಪಿಪೀಲಿಕಾನ್ತತನುಷು  ಪ್ರೋತಾ ಜಗತ್ಸಾಕ್ಷಿಣಿ

ಸೈವಾಹಂ ನ ಚ ದೃಶ್ಯವಸ್ತಿವತಿ ದೃಢಪ್ರಜ್ನಾಪಿ ಯಸ್ಯಾತಿ ಚೇ

ಚ್ಚಂಡಾಲೋsಸ್ತು ಸತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ      ೧

ಜಾಗ್ರತಾವಸ್ಥೆಯಲ್ಲಿ, ಸ್ವಪ್ನಾವಸ್ಥೆಯಲ್ಲಿ ಮತ್ತು ಸುಷುಪ್ತಾವಸ್ಥೆಯಲ್ಲಿ ಅಂದರೆ ಆಳವಾದ ನಿದ್ರಾವಸ್ಥೆಯಲ್ಲಿ ಯಾವುದು ಬೆಳಗುತ್ತಿದ್ದೆಯೋ, ಯಾವುದರಿಂದ ನಾವು  ವಿಷಯಗಳನ್ನು ತಿಳಿದುಕೊಂಡು ಅರ್ಥಮಾಡಿಕೊಳ್ಳುತ್ತಿದ್ದೇವೆಯೋ.

ಯಾ ಬ್ರಹ್ಮಾದಿಪಿಪೀಲಿಕಾನ್ತತನುಷು  ಪ್ರೋತಾ ಜಗತ್ಸಾಕ್ಷಿಣಿ

ಸೃಷ್ಟಿಕರ್ತನಿಂದ ಮೊದಲ್ಗೊಂಡು ಚಿಕ್ಕ ಇರುವೆಯವರೆಗೂ ಯಾವ ಕಾಂತಿಕಣ ಇದೆಯೋ, ಬ್ರಹ್ಮಾಂಡದ  ಎಲ್ಲಾ ನಾಟಕಕ್ಕೆ ಸಾಕ್ಷಿಯಾಗಿರುವಂತಾದ್ದು ಯಾವುದೋ

ಸೈವಾಹಂ ನ ಚ ದೃಶ್ಯವಸ್ತಿವತಿ ದೃಢಪ್ರಜ್ನಾಪಿ ಯಸ್ಯಾತಿ ಚೇ

 “ಅದು” .ಮತ್ತು “ಅದು” ಮಾತ್ರವೇ ’ನಾನು” ಎಂಬ ಪ್ರಜ್ನೆಯೇ ಹೊರತು ಕಣ್ಣಿಗೆ ಕಾಣುವ ವಸ್ತುಗಳು “ಅದು” ಅಲ್ಲಾ  

ಚ್ಚಂಡಾಲೋsಸ್ತು ಸತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ.

ಆ “ನಾನು”  ಎಂಬ ಬ್ರಹ್ಮ ಪ್ರಜ್ನೆಯನ್ನು  ಅರಿತವನು   ಚಾಂಡಾಲನಾಗಿರಲಿ, ಬ್ರಾಹ್ಮಣನಾಗಿರಲಿ,  ಅಂತಹವನು ನಿಶ್ಚಯವಾಗಿ ಗುರು ಆಗಲು ಅರ್ಹನು ಮತ್ತು ಯೋಗ್ಯನು. ಇದು ನನ್ನ ಸ್ಥಿರವಾದ ನಂಬಿಕೆ. ಮನೀಷಾ ಮಮ.

ಇದು ಭಗವತ್ಪಾದ ಶಂಕರರ ಮನೀಷಾ ಪಂಚಕದ ಮೊದಲನೇ ಶ್ಲೋಕ.

ಈ ಶ್ಲೋಕಕ್ಕೆ ಮತ್ತಷ್ಟು ವಿವರಣೆ ಕೊಡುವ ಪ್ರಯತ್ನ ಮಾಡೋಣ.

ಐತ್ರೇಯ ಉಪನಿಷದ್ ನ ಮೂರನೇ ಅಧ್ಯಾಯದ ಮೂರನೇ ಶ್ಲೋಕ ಹೀಗಿದೆ;

ಶಾ ಬ್ರಹ್ಮೈಷ ಇಂದ್ರ ಶಾ ಪ್ರಜಾಪತಿರೇತೇ ಸರ್ವೇ ದೇವಾ ಇಮಾನಿ ಚ

ಪಂಚಮಹಾಭೂತಾನಿ ಪೃಥಿವೀ ವಾಯುರಾಕಾಶ ಆಪೋ 

ಜ್ಯೋತಿಂಷಿತ್ಯೇತಾನೀಮಾನಿ   ಚ   ಕ್ಷುದ್ರಮಿಶ್ರಾಣಿವ

ಬೀಜಾನೀತರಾಣಿ ಚೇತರಾಣಿ  ಚಾಂಡಜಾನಿ ಚ ಜಾರುಜಾನೀ ಚ

ಸ್ವೇದಾಜಾನಿ ಚೋದ್ಭಿಜ್ಜಾನಿ  

ಚಾಶ್ವಾ ಗಾವಃ ಪುರುಷ ಹಸ್ತಿನೋ ಯತ್ಕಿಂಚೇದಂ ಪ್ರಾಣಿ ಜಂಗಮಂ ಚ ಪತತ್ರಿ

ಚ ಯಚ್ಚ ಸ್ಥಾವರಂ ಸರ್ವಂ ತತ್ಪ್ರಜ್ನಾನೇತ್ರಂ  ಪ್ರಜ್ನಾನೇ ಪ್ರತಿಷ್ಠಿತಂ

ಪ್ರಜ್ನಾನೇತ್ರೋ ಲೋಕಃ ಪ್ರಜ್ನಾ ಪ್ರತಿಷ್ಠಾ ಪ್ರಜ್ನಾನಂ ಬ್ರಹ್ಮ

ಈ ಶ್ಲೋಕ ದ ಅರ್ಥ ಹೀಗಿದೆ:

ಅವನೇ  ಬ್ರಹ್ಮ, ಅವನೇ  ಇಂದ್ರ, ಅವನೇ ಪ್ರಜಾಪತಿ, ಅವನೇ ಈ ಎಲ್ಲಾ ದೇವತೆಗಳು. ಅವನೇ ಪಂಚ ಮಹಾಭೂತಗಳಾದ ಭೂಮಿ, ವಾಯು, ಆಕಾಶ, ಜಲ ಮತ್ತು ಅಗ್ನಿ. ಮೊಟ್ಟೆಯಿಂದ ಹುಟ್ಟುವ, ಗರ್ಭದಿಂದ ಜನಿಸುವ, ಮೊಳಕೆಯಿಂದ ಹುಟ್ಟುವ ಎಲ್ಲಕ್ಕೂ ಅವನೇ ಮೂಲ. ಅವನೇ ಕುದುರೆಗಳು, ಹಸುಗಳು, ಮನುಷ್ಯರು, ಅನೆಗಳು. ಇಲ್ಲಿ ಯಾವ್ಯಾವುದು ಉಸಿರಾಡುತ್ತದೆಯೋ, ಅವು ನೆಲದಮೇಲೆ ನಡೆಯಲಿ, ರೆಕ್ಕೆಗಳಿಂದ ಹಾರಲಿ ಅಥವಾ ಚಲನೆಯೇ ಇಲ್ಲದಿರಲಿ ಅವೆಲ್ಲಕ್ಕೂ ಪ್ರಜ್ನೆಯಿಂದಲೇ ಮಾರ್ಗದರ್ಶನ, ಮತ್ತು ಬೆಂಬಲ. ಬ್ರಹ್ಮಾಂಡದ ಆಧಾರವೇ, ಮೂಲತತ್ವವೇ ಪ್ರಜ್ನೆ.  ಹಾಗಾಗಿ ಈ ಪ್ರಜ್ನೆಯೇ ಬ್ರಹ್ಮ. ಪ್ರಜ್ನಾನಂ ಬ್ರಹ್ಮ.

ಪ್ರಜ್ನಾನಂ ಬ್ರಹ್ಮ ಎನ್ನುವುದು ಮೊದಲನೇ ಮಹಾವಾಕ್ಯ.

ಪ್ರಜ್ನೆ ಎನ್ನುವ ಬಗ್ಗೆ ವಿವರಣೆ ಕೊಟ್ಟಷ್ಟೂ ಅದು ಕಬ್ಬಿಣದ ಕಡಲೆಯಾಗುತ್ತಾ ಹೋಗುತ್ತದೆ, ಹಾಗಾಗಿ ಅದನ್ನು ಅನುಭವಿಸುವ ಪ್ರಯತ್ನ ಪಟ್ಟರೆ ಅದು ಬೆಲ್ಲದಷ್ಟು ಸಿಹಿ ಮತ್ತು ಬೆಣ್ಣೆಯಷ್ಟು ಮೃದು. ಆ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಸಾಗಬೇಕಿದೆ.

ಮನೀಷಾ ಪಂಚಕದ ಮುಂದಿನ ಮೂರು ಶ್ಲೋಕಗಳು ಕ್ರಮವಾಗಿ, ಅಹಂ ಬ್ರಹ್ಮಾಸ್ಮಿ, ತತ್ವಮಸಿ, ಅಯಮಾತ್ಮ ಬ್ರಹ್ಮ ಎನ್ನುವ ಇನ್ನು ಮೂರು ಮಹಾವಾಕ್ಯಗಳನ್ನು ನಮಗೆ ಪರಿಚಯಿಸಿದರೆ ಕೊನೆಯ ಶ್ಲೋಕ “ಮೋಕ್ಷಸ್ಯ ಆನಂದ” ಎನ್ನುವದನ್ನು ಹೇಳುತ್ತದೆ.

ಶ್ರೀ ಶಂಕರ ಭಗವತ್ಪಾದರು ಸ್ಥಾಪಿಸಿದ ನಾಲ್ಕು ಆಮ್ನಾಯ ಪೀಠಗಳು ನಾಲ್ಕು ಮಹಾವಾಕ್ಯಗಳನ್ನು ಪ್ರತಿನಿಧಿಸುತ್ತವೆ.

ಪೂರ್ವಾಮ್ನಾಯದ ಪುರಿಯ ಗೋವರ್ಧನ ಪೀಠವು ಪ್ರಜ್ನಾನಂ ಬ್ರಹ್ಮ ಎಂಬ ಮಹಾವಾಕ್ಯವನ್ನು ಪ್ರತಿನಿಧಿಸಿದರೆ,  ಅಹಂ ಬ್ರಹ್ಮಾಸ್ಮಿಯನ್ನು ಶೃಂಗೇರಿಯ ಶಾರದಾ ಪೀಠವೂ, ತತ್ವಮಸಿಯನ್ನು ದ್ವಾರಕೆಯ ಕಾಳಿಕಾ ಪೀಠವೂ ಮತ್ತು ಅಯಮಾತ್ಮ ಬ್ರಹ್ಮ ಮಹಾವಾಕ್ಯವನ್ನು ಬದರಿಕಾಶ್ರಮದ ಜ್ಯೋತಿರ್ ಮಠವೂ ಪ್ರತಿನಿಧಿಸುತ್ತವೆ.

ಈ ನಾಲ್ಕು ಮಹಾವಾಕ್ಯಗಳಲ್ಲದೆ, ವಿವೇಕ ಚೂಡಾಮಣಿಯ ’ಬ್ರಹ್ಮ ಸತ್ಯ ಜಗನ್ ಮಿಥ್ಯ”  ಈಶೋಪನಿಷತ್ತಿನ “ ಸೋಹಂ” ಮತ್ತು  ಛಾಂದೋಗ್ಯ ಉಪನಿಷತ್ತಿನ ’ ಏಕಮೇವಾsದ್ವಿತೀಯಂ ಬ್ರಹ್ಮ’ ಮತ್ತು “ ಸರ್ವಂ ಖಲ್ವಿದಂ ಬ್ರಹ್ಮ” ಈ ನಾಲ್ಕು ವಾಕ್ಯಗಳನ್ನೂ ಮಹಾವಾಕ್ಯಗಳೆಂದೇ ಕರೆಯಲಾಗಿದೆ.

ಈಗ ಮನೀಷಾ ಪಂಚಕದ ಎರಡನೆಯ ಶ್ಲೋಕವನ್ನು ನೋಡೋಣ

ಬ್ರಹ್ಮೈವಾಹಮಿದಂ ಜಗಚ್ಚ ಸಕಲಂ ಚಿನ್ಮಾತ್ರವಿಸ್ತಾರಿತಂ

ಸರ್ವಂ ಚೈತದವಿದ್ಯಾಯಾ ತ್ರಿಗುಣಯಾsಶೋಷಂ ಮಯಾ ಕಲ್ಪಿತಮ್

ಇತ್ಥಂ ಯಸ್ಯ ದೃಢಾ ಮತಿಃ  ಸುಖತರೇ ನಿತ್ಯೇ ಪರೇ ನಿರ್ಮಲೇ 

ಚಣ್ಡಾಲೋsಸ್ತು ಸ ತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ

ಬ್ರಹ್ಮೈವಾಹಮಿದಂ ಜಗಚ್ಚ ಸಕಲಂ ಚಿನ್ಮಾತ್ರವಿಸ್ತಾರಿತಂ

ನಾನು ಶುದ್ಧ ಪ್ರಜ್ನೆ ಅಂದರೆ ಬ್ರಹ್ಮನ್. ಇಡೀ ಬ್ರಹ್ಮಾಂಡವು ಈ ಶುದ್ಧ ಪ್ರಜ್ನೆಯ ವಿಸ್ತಾರ ಅಷ್ಟೆ.

ಸರ್ವಂ ಚೈತದವಿದ್ಯಾಯಾ ತ್ರಿಗುಣಯಾsಶೋಷಂ ಮಯಾ ಕಲ್ಪಿತಮ್

ಮಾಯೆಯಿಂದ ಅಥವಾ ಅರಿವು ಇಲ್ಲದಿರುವುದರಿಂದ ನಾವು ಕಾಣುವುದೆಲ್ಲವೂ, ನೋಡುವುದೆಲ್ಲವೂ, ಮೂರು ಗುಣಗಳಿಂದ ಅಗಿರುವುದಾಗಿ ಕಲ್ಪಿಸಿಕೊಳ್ಳಲಾಗಿದೆ ಅಥ್ವಾ ಅರ್ಥ ಮಾಡಿಕೊಳ್ಳಲಾಗಿದೆ.

ಇತ್ಥಂ ಯಸ್ಯ ದೃಢಾ ಮತಿಃ  ಸುಖತರೇ ನಿತ್ಯೇ ಪರೇ ನಿರ್ಮಲೇ

ಚಣ್ಡಾಲೋsಸ್ತು ಸ ತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ

ಪರಮಾನಂದದಲ್ಲಿ, ಶಾಶ್ವತದಲ್ಲಿ, ಮತ್ತು ಪರಿಶುದ್ಧವಾದ ಸರ್ವೋಚ್ಛ ಸತ್ಯದಲ್ಲಿ ಯಾರ ಬುದ್ಧಿಯು ಸ್ಥಿರವಾಗಿ ಸ್ಥಾಪಿತವಾಗಿದೆಯೋ, ಅಂತಹವನು ಚಾಂಡಾಲನೇ ಇರಲಿ, ಬ್ರಾಹ್ಮಣನೇ ಇರಲಿ  ನಿಶ್ಚಯವಾಗಿ ಗುರು ಆಗಲು ಅರ್ಹನು ಮತ್ತು ಯೋಗ್ಯನು. ಇದು ನನ್ನ ಸ್ಥಿರವಾದ ನಂಬಿಕೆ. ಮನೀಷಾ ಮಮ

ಎರಡನೇ ಮಹಾವಾಕ್ಯ “ಅಹಂ ಬ್ರಹ್ಮಾಸ್ಮಿ “ ಎಂಬುದನ್ನು ಯಜುರ್ವೇದದ ಬೃಹದಾರಣ್ಯಕ ಉಪನಿಷತ್ತಿನ ಮೊದಲನೇ ಕಾಂಡದ ನಾಲ್ಕನೇ ಅಧ್ಯಾಯದ ಹತ್ತನೇ ಮಂತ್ರದಿಂದ ಪಡೆಯಲಾಗಿದೆ. ಈ ಮಂತ್ರವನ್ನು ಒಮ್ಮೆ ಹೇಳೋಣ:

ಬ್ರಹ್ಮ ವಾ ಇದಮಗ್ರ ಆಸೀತ್ ಬ್ರಹ್ಮ ವೈ ಇದಮ್ ಅಗ್ರೇ ಆಸೀತ್

ತದಾತ್ಮಾನಮೇವಾವೇದ್ ತದ್ ಆತ್ಮಾನಮ್ ಏವ ಅವೇತ್

ಅಹಂ ಬ್ರಹ್ಮಾಸ್ಮೀತಿ ।

 ಅಹಮ್ ಬ್ರಹ್ಮ ಅಸ್ಮಿ ಇತಿ ತಸ್ಮಾತ್ತತ್ಸರ್ವಮಭವತ್

 ತಸ್ಮಾದ್ ತದ್ ಸರ್ವಮ್ ಅಭವತ್

ತದ್ಯೋ ಯೋ ದೇವಾನಾಂ ಪ್ರತ್ಯಬುಧ್ಯತ

 ತದ್ ಯಸ್ ಯಸ್ ದೇವಾನಾಮ್ ಪ್ರತ್ಯಬುಧ್ಯತ ಸ ಏವ ತದಭವತ್

 ಸಸ್ ಏವ ತದ್ ಅಭವತ್ ತಥರ್ಷೀಣಾಮ್

  ತಥಾ ಋಷೀನಾಮ್ ತಥಾ ಮನುಷ್ಯಾಣಾಮ್ ।

 ತಥಾ ಮನುಷ್ಯಾಣಾಮ್ ತದ್ಧೈತತ್ಪಶ್ಯನ್ನೃಷಿರ್ವಾಮದೇವಃ ಪ್ರತಿಪೇದೇ

  ತದ್ ಧ ಏತದ್ ಪಶ್ಯನ್ ಋಷಿಸ್ ವಾಮದೇವಸ್ ಪ್ರತಿಪೇದೇಽಹಂ ಮನುರಭವꣳ ಸೂರ್ಯಶ್ಚೇತಿ ।

 ಅಹಮ್ ಮನುಸ್ ಅಭವಮ್ ಸೂರ್ಯಸ್ ಚ ಇತಿ ತದಿದಮಪ್ಯೇತರ್ಹಿ ಯ ಏವಂ ವೇದಾಹಂ ಬ್ರಹ್ಮಾಸ್ಮೀತಿ

 ತದ್ ಇದಮ್ ಅಪಿ ಏತರ್ಹಿ ಯಸ್ ಏವಮ್ ವೇದ ಅಹಮ್ ಬ್ರಹ್ಮ ಅಸ್ಮಿಇತಿ

ಸ ಇದꣳ ಸರ್ವಂ ಭವತಿ ಸ ಇದಮ್ ಸರ್ವಮ್ ಭವತಿ

ತಸ್ಯ ಹ ನ ದೇವಾಶ್ಚನಾಭೂತ್ಯಾ ಈಶತ ತಸ್ಯ ಹ ನ ದೇವಾಸ್ ಚನ ಅಭೂತ್ಯಾಸ್ ಈಶತೇ

ಆತ್ಮಾ ಹ್ಯೇಷಾꣳ ಸ ಭವತ್ಯ್ ಆತ್ಮಾ ಹಿ ಏಷಾಮ್ ಸ ಭವತಿ

ಅಥ ಯೋಽನ್ಯಾಂ ದೇವತಾಮುಪಾಸ್ತೇ ಅಥ ಯಸ್ ಅನ್ಯಾಮ್ ದೇವತಾಮ್ ಉಪಾಸ್ತೇಽನ್ಯೋಽಸಾವ್

 ಅನ್ಯಸ್ ಅಸೌಅನ್ಯೋಽಹಮಸ್ಮೀತಿ

 ಅನ್ಯಸ್ ಅಹಮ್ ಅಸ್ಮಿ ಇತಿ

ನ ಸ ವೇದ ।

 ನ ಸ ವೇದ

ಯಥಾ ಪಶುರೇವꣳ ಸ ದೇವಾನಾಮ್ ।

  ಯಥಾ ಪಶುಸ್ ಏವಮ್ ಸ ದೇವಾನಾಮ್

ಯಥಾ ಹ ವೈ ಬಹವಃ ಪಶವೋ ಮನುಷ್ಯಂ ಭುಂಜ್ಯುರ್

  ಯಥಾ ಹ ವೈ ಬಹವಸ್ ಪಶವಸ್ ಮನುಷ್ಯಮ್ ಭುಂಜ್ಯುಃ

ಏವಮೇಕೈಕಃ ಪುರುಷೋ ದೇವಾನ್ಭುನಕ್ತ್ಯ್

  ಏವಮ್ ಏಕೈಕಸ್ ಪುರುಷಸ್ ದೇವಾನ್ ಭುನಕ್ತಿ

ಏಕಸ್ಮಿನ್ನೇವ ಪಶಾವಾದೀಯಮಾನೇಽಪ್ರಿಯಂ ಭವತಿ

  ಏಕಸ್ಮಿನ್ ಏವ ಪಶೌ ಆದೀಯಮಾನೇ ಅಪ್ರಿಯಮ್ ಭವತಿ

ಕಿಮು ಬಹುಷು

  ಕಿಮ್ ಉ ಬಹುಷು

ತಸ್ಮಾದೇಷಾಂ ತನ್ನ ಪ್ರಿಯಂ ಯದೇತನ್ಮನುಷ್ಯಾ ವಿದ್ಯುಃ ॥ 10 ॥

 ಈ ಮಂತ್ರದ ಭಾವಾರ್ಥವನ್ನು ನೋಡೋಣ.

ಆರಂಭದಲ್ಲಿ ಆತ್ಮವು ನಿಶ್ಚಯವಾಗಿ ಬ್ರಹ್ಮನೇ ಆಗಿತ್ತು. ನಾನು ಬ್ರಹ್ಮ ಎಂಬ ಅರಿವು ಸಹಾ ಆತ್ಮಕ್ಕೆ ಇತ್ತು. ಹಾಗಾಗಿಯೇ ಅದು ಎಲ್ಲವೂ ತಾನೇ ಆಯಿತು. ಯಾರಿಗೆ, ಯಾವುದಕ್ಕೆ  ಈ ಜ್ನಾನೋದಯ ಆಯಿತೋ ಅವೆಲ್ಲವೂ ಬ್ರಹ್ಮನೇ ಆಯಿತು. ಇದು ಋಷಿಗಳಿಗೂ ಸಾಮಾನ್ಯ ಮನುಷ್ಯರಿಗೂ ಒಂದೇ, ಬೇರೆ ಅಲ್ಲಾ. ವಾಮದೇವ ಋಷಿ ಈ ಆತ್ಮವನ್ನು ಅರಿತಾಗಲೇ ತಾನೇ ಮನು ಮತ್ತು ಸೂರ್ಯ ಎಂಬುದು ತಿಳಿದಿದ್ದು.  ಹಾಗೆಯೇ, ಈಗಲೂ ಸಹಾ ಯಾರು ಈ ಬ್ರಹ್ಮವನ್ನು ’ನಾನು ಬ್ರಹ್ಮ” ಎಂದು ಅರಿಯುತ್ತಾರೋ ಅವರು ಈ ಬ್ರಹ್ಮಾಂಡದಲ್ಲಿ ಎಲ್ಲವೂ ಅವರೇ ಆಗಿಬಿಡುತ್ತಾರೆ.

ಮನುಷ್ಯ ತಾನು  ಬೇರೆ ತಾನು  ಆರಾಧಿಸುವ, ಪೂಜಿಸುವ ದೇವತೆ ಬೇರೆ ಎಂದು ಭಾವಿಸಿದರೆ ಅಂತಹವರು ದೇವತೆಗಳಿಗೆ ಪ್ರಾಣಿಗಳ ಸಮಾನರಾಗುತ್ತಾರೆ. ಹೇಗೆಂದರೆ ಪ್ರಾಣಿಗಳು ಮನುಷ್ಯನನ್ನ್ನು ಸೇವಿಸುತ್ತವೆ. ಹಾಗೆಯೇ ಆ ಮನುಷ್ಯನು ದೇವತೆಗಳನ್ನು ಸೇವಿಸಿದಂತಾಗುತ್ತದೆ ಅಷ್ಟೆ.  ಈ ರಹಸ್ಯ ನಮಗೆ ಅರ್ಥ ಆಗಬೇಕು. ಆಗ ನಾವು ಆರಾಧಿಸುವ ಮಾನಸಿಕ ಸ್ಥಿತಿಯೇ ಬೇರೆ ಆಗುತ್ತದೆ.

ಬೃಹದಾರಣ್ಯಕ ಉಪನಿಷತ್ ವಾಕ್ಯ ವಿಚಿತ್ರವಾದ್ದನ್ನೋ, ಯಾವುದೋ ಹೊಸತನ್ನೋ ಹೇಳುತ್ತಿಲ್ಲ. ವಾಸ್ತವತೆ ಯನ್ನು ಬಹಳ ಪರಿಣಾಮಕಾರಿಯಾಗಿ ಹೇಳಿದೆ ಅಷ್ಟೆ. ನಾವು ಯಾವುದೇ ದೇವತೆಯನ್ನು ಪೂಜಿಸುವ ಮೊದಲು ಆ ದೇವತೆಯನ್ನು ಕಳಶದಲ್ಲೋ, ಬಿಂಬದಲ್ಲೋ, ಮಂಡಲದಲ್ಲೋ,ಮೂರ್ತಿ ಯಲ್ಲೋ ಅವಾಹಿಸಿ ಪ್ರಾಣಪ್ರತಿಷ್ಠೆ ಮಾಡುತ್ತೇವೆ.. ಈ ಮಂತ್ರವು. “ ನನ್ನ ಜೀವವು, ಪ್ರಾಣವು

ವಾಕ್ ಮನಸ್ಸ್ಸು, ಕಿವಿ ಕಣ್ಣು ನಾಲಿಗೆ ಎಲ್ಲವೂ, ನಾನು ಆವಾಹಿಸುತ್ತಿರುವ ದೇವತೆಯದಾಗಿರಲಿ, ಹಾಗೂ ದೇವತೆಯ ಜೀವವೂ ಪ್ರಾಣವೂ ನನ್ನಲ್ಲಿ ನೆಲಸಲಿ, ಎಂದು ಹೇಳುತ್ತದೆ. ಅದು ನಮಗೆ ಅರ್ಥ ಆಗುತ್ತದೋ ಇಲ್ಲವೋ ಪೂಜೆಯನ್ನಂತೂ ಮಾಡುತ್ತೇವೆ.

ಅಹಂ ಬ್ರಹ್ಮಾಸ್ಮಿ ಎಂಬುದು ಕೇಳಲಿಕ್ಕೆ ಅಹಂಕಾರದಿಂದ ಹೇಳುತ್ತಿರುವುದು ಎನಿಸಬಹುದು. ಒಬ್ಬ ವ್ಯಕ್ತಿ ಒಬ್ಬ ಮಹಾತ್ಮನನ್ನು ಕೇಳಿದನಂತೆ. “ ನೀವು ಏಕೆ ಇಷ್ಟು ಸೊಕ್ಕಿನಿಂದ “ ಅಹಂ ಬ್ರಹ್ಮಾಸ್ಮಿ” ಎಂದು ಹೇಳುತ್ತಿದ್ದೀರಿ ಎಂದು. ಆ ಮಹಾತ್ಮ ಉತ್ತರಿಸಿದನಂತೆ, ನನಗೆ ಹಾಗೆ ಹೇಳಲು ಇಷ್ಟವಿಲ್ಲ ಆದರೆ ಏನು ಮಾಡಲಿ “ ನಾನು ಅದೇ”.  ಯಾರು ಬ್ರಹ್ಮವನ್ನು ಈ ರೀತಿಯಲ್ಲಿ ಗುರುತಿಸುತ್ತಾರೋ ಅವರು ಚಾಂಡಾಲನಾಗಿರಲಿ, ಬ್ರಾಹ್ಮಣನಾಗಿರಲಿ ಅವರನ್ನು ಗುರು ಎಂದು ಪರಿಗಣಿಸಲು ಅರ್ಹರಾಗಿರುತ್ತಾರೆ. ಇದು ನನ್ನ ಸ್ಥಿರವಾದ ನಂಬಿಕೆ. ಮನೀಷಾ ಮಮ. ಎನ್ನುತ್ತಾರೆ ಶಂಕರ ಭಗವತ್ಪಾದರು.

ಈಗ ಮನೀಷಾ ಪಂಚಕದ  ಮೂರನೇ ಶ್ಲೋಕವನ್ನು ನೋಡೋಣ.

ಶಶ್ವನ್ನಶ್ವರಮೇವ  ವಿಶ್ವಮಖಿಲಂ ನಿಶ್ಚಿತ ವಾಚಾ ಗುರೋ

ರ್ನಿತ್ಯಂ ಬ್ರಹ್ಮ ನಿರಂತರಮ್ ವಿಮೃಶಾತಾ ನಿರ್ವ್ಯಾಜಶಾಂತಾತ್ಮನಾ

ಭೂತಂ ಭಾವಿ ಚ ದುಷ್ಕೃತಂ ಪ್ರದಹತ ಸಂವಿನ್ಮಯೇ ಪಾವಕೇ

ಪ್ರಾರಬ್ಧಾಯ ಸಮರ್ಪಿತಂ ಸ್ವವಪುರಿತ್ಯೇಷಾ ಮನೀಷಾ ಮಮ   ೩

ಶಶ್ವನ್ನಶ್ವರಮೇವ  ವಿಶ್ವಮಖಿಲಂ ನಿಶ್ಚಿತ ವಾಚಾ ಗುರೋ

ಗುರುವಿನ  ನಿಶ್ಚಿತ ವಾಕ್ಯದಂತೆ ಈ ಜಗತ್ತು ನಶ್ವರವಾದ್ದು ಮತ್ತು ಶಾಶ್ವತವಲ್ಲದ್ದು ಆಗಿದೆ.

ರ್ನಿತ್ಯಂ ಬ್ರಹ್ಮ ನಿರಂತರಮ್ ವಿಮೃಶಾತಾ ನಿರ್ವ್ಯಾಜಶಾಂತಾತ್ಮನಾ

ಎಚ್ಚರಿಕೆಯಿಂದ,ಕಳಂಕ ರಹಿತ,ನೆಮ್ಮದಿಯ ಮತ್ತು ಶಾಂತಿಯ ಪ್ರಜ್ನೆಯಿಂದ ವಿಮರ್ಶೆ ಮಾಡಿದ್ದೇ ಆದರೆ “ಬ್ರಹ್ಮನ್” ಎಂಬುದು  ನಿತ್ಯವಾದ್ದ್ದು, ಚಿರಂತನವಾದ್ದು ಶಾಶ್ವತವಾದ್ದು, ಅಪ್ರತಿಮವಾದ್ದು ಮತ್ತು  ಭೇದರಹಿತವಾದ್ದೂ ಆಗಿದೆ.

ವಿಭಿನ್ನ ಯೋಚನೆಗಳಿಂದ ಹೊರಬಂದು “ ಬ್ರಹ್ಮನ್” ಎನ್ನುವುದು ಶಾಶ್ವತವಾದ್ದು ಎಂಬುದರ ಮೇಲೆ ಮನಸ್ಸು ನೆಲೆಸಿದರೆ, ಅಂತಹ ಮನಸ್ಸು  ಶಾಂತತೆಯನ್ನು , ಸಮತೋಲತೆ ಯನ್ನು ಪಡೆದುಕೊಳ್ಳುತ್ತದೆ ಎಂಬುದಾಗಿಯೂ ಅರ್ಥೈಸಬಹುದು.

ಭೂತಂ ಭಾವಿ ಚ ದುಷ್ಕೃತಂ ಪ್ರದಹತ ಸಂವಿನ್ಮಯೇ ಪಾವಕೇ

ಪ್ರಾರಬ್ಧಾಯ ಸಮರ್ಪಿತಂ ಸ್ವವಪುರಿತ್ಯೇಷಾ ಮನೀಷಾ ಮಮ

ನಮ್ಮ ಭೌತಿಕ ಶರೀರಗಳು ನಾವು ಹಿಂದೆ ಮಾಡಿರುವ, ಈಗ ಮಾಡುತ್ತಿರುವ ಮತ್ತು ಮುಂದೆ ಮಾಡಬಹುದಾದ ( ಭಾವಿ ಚ ಎನ್ನುವದನ್ನು ಗಮನಿಸಬೇಕು- ಇದು ಮುಂದೆ ಮಾಡಬಹುದಾದ ಎಂಬುದನ್ನು ಸೂಚಿಸುತ್ತದೆ) ಪಾಪ ಕೃತ್ಯಗಳ ವಾಸನೆ ಗಳಿಂದಾಗಿರುವುವು. ಯಾರು ಶುದ್ಧ ಪ್ರಜ್ನೆಯೆಂಬ ಅಗ್ನಿಯಲ್ಲಿ ಈ ಪಾಪಗಳನ್ನು ದಹಿಸಬಲ್ಲನೋ ಆತನು ಜ್ನಾನಿ. ಅಂತಹವನು ಚಾಂಡಾಲನೇ ಇರಲಿ, ಬ್ರಾಹ್ಮಣನೇ ಇರಲಿ  ನಿಶ್ಚಯವಾಗಿ ಗುರು ಆಗಲು ಅರ್ಹನು ಮತ್ತು ಯೋಗ್ಯನು. ಇದು ನನ್ನ ಸ್ಥಿರವಾದ ನಂಬಿಕೆ. ಮನೀಷಾ ಮಮ.

ಈ ಶ್ಲೋಕವು “ತತ್ ತ್ವಮ್ ಅಸಿ” ಎಂಬ ಮೂರನೇ ಮಹಾವಾಕ್ಯವನ್ನು ಎತ್ತಿಹಿಡಿಯುತ್ತಿದೆ.  ತತ್ ತ್ವಂ ಅಸಿ ಎಂದರೆ ಅದು ನೀನು. ಅದು ಅಂದರೆ ನೀನು, ಬ್ರಹ್ಮ, ಅಥ್ವಾ ನೀನು ಪ್ರಜ್ನೆ ಎಂದು ಅರ್ಥ.

ಉದ್ಧಾಲಕ ಮತ್ತು ಆತನ ಮಗ ಶ್ವೇತಕೇತುವಿನ ನಡುವಿನ ಸಂಭಾಷಣೆಯ ರೂಪದಲ್ಲಿ  ಛಾಂದೋಗ್ಯ ಉಪನಿಷತ್ತಿನ  ಆರನೇ ಅದ್ಯಾಯದ ಏಳನೇ ವಿಭಾಗದ ಎಂಟನೇ ಶ್ಲೋಕದಲ್ಲಿ ತತ್ ತ್ವಂ ಅಸಿ ಎನ್ನುವ ಮಹಾವಾಕ್ಯ ಇದೆ.

ಸ ಯ ಏಷೋ ಣಿಮೈತದಾತ್ಮಮಿದಂ ಸರ್ವ ತತ್ಸತ್ಯಂ ಸ ಆತ್ಮಾ ತತ್ವಮಸಿ  ಶ್ವೇತಕೇತೋ ಇತಿ ಭೂಯ ಏವ ಮಾ ಭಗವಾನ್ವಿಜ್ನಾಪಯತ್ವಿತಿ ತಥಾ ಸೋಮ್ಯೇತಿ ಹೋವಾಚ.

ಯಾವುದು ಸೂಕ್ಷ್ಮಾತಿ ಸೂಕ್ಷ್ಮವೋ ಅದು ಸತ್ಯ. ಅದು ಆತ್ಮ. ನಾವು ಅನೇಕ ರೂಪಗಳನ್ನು ನಮ್ಮ ಮುಂದೆ ಕಾಣುತ್ತೇವೆ. ಅವು ನಿರಂತರವಾಗಿ ಬದಲಾವಣೆ ಅಗುತ್ತಲೇ ಇರುತ್ತವೆ. ಆದರೆ ಇವುಗಳ ಮೂಲ ಯಾವುದೋ,ಅದು ಬದಲಾವಣೆ ಆಗುವುದಿಲ್ಲಾ. ಅದು ನಮ್ಮ ನಿಜ ಸ್ವರೂಪ. “ಅದು ನಾನು”- ತತ್ ತ್ವಮ್ ಅಸಿ . ಎಲ್ಲಿಯವರೆಗೆ ನಾವು ನಮ್ಮ ದೇಹದೊಂದಿಗೆ ’ ನಾನು’ ಎನ್ನುವುದನ್ನು ಗುರುತಿಸಿಕೊಳ್ಳ್ಳು ತ್ತೇವೆಯೋ ಅಲ್ಲಿಯವರೆಗೆ ನಾವು ಬೇರೆಯವರೊಂದಿಗೆ ಪ್ರತ್ಯೇಕವಾಗಿಯೇ ಗುರುತಿಸಿಕೊಳ್ಳುತ್ತೇವೆ. ’ನಾನು ಬ್ರಾಹ್ಮಣ, ನಾನು ಬುದ್ಧಿವಂತ, ನಾನು ಅಜ್ನಾನಿ, ನಾನು ಇಂತಹ ಊರಿನವನು, ನಾನು ಉದ್ದವಾಗಿದ್ದೇನೆ, ನಾನು ಕುಳ್ಳಗಿದ್ದೇನೆ, ನಾನು ಬೆಳ್ಳಗಿದ್ದೇನೆ, ನಾನು ಕಪ್ಪಗಿದ್ದೇನೆ ಇವೆಲ್ಲಾ ಉಪಾದಿಗಳು. ಇವೆಲ್ಲವನ್ನೂ ತೆಗೆದುಹಾಕಿದಾಗಲೇ ಸತ್ಯ ದರ್ಶನ ಆಗಲು ಸಾಧ್ಯ.

ಈಗ ಮನೀಷಾ ಪಂಚಕದ ನಾಲ್ಕನೇ ಶ್ಲೋಕಕ್ಕೆ ಹೋಗೋಣ.

ಯಾ ತಿರ್ಯಂನರದೇವತಾಭಿರಹಮಿತ್ಯನ್ತಃ ಸ್ಫುಟಾ ಗೃಹ್ಯತೇ

ಯದ್ಭಾಸಾå ಹೃದಯಕ್ಷದೇಹವಿಷಯಾ ಭಾನ್ತಿ ಸ್ವತೋsಚೇತನಾಃ

ತಾಂ ಭಾಸ್ಯೈ ಪಿಹಿತಾರ್ಕಮಣ್ಡಲನಿಭಾಂ ಸ್ಫೂರ್ತಿಂ ಸದಾ ಭಾವಯ-

ನ್ಯೋಗಿ ನಿವೃತಮನಸೋ ಹಿ ಗುರುರಿತ್ಯೇಷಾ ಮನೀಷಾ ಮಮ          ೪

ಯಾವ ಶುದ್ಧ ಪ್ರಜ್ನೆಯಿಂದ  ಪ್ರಾಣಿಗಳು, ಮನುಷ್ಯರು, ದೇವತೆಗಳು ಗುರುತಿಸಲ್ಪಡುತ್ತಿದ್ದಾರೋ, ತನ್ನಂತಾನೇ ಗುರುತಿಸಿಕೊಳ್ಳಲಾರದ ಮನಸ್ಸು, ಇಂದ್ರಿಯಗಳು, ಯಾವುದರ ಬೆಳಕಿನಿಂದ ಬೆಳಗುತ್ತಿವೆಯೋ, ಯಾವ ಬೆಳಕು ಮೋಡವನ್ನು ಮುಚ್ಚಿದ ಸೂರ್ಯನಂತೆ ಇದ್ದು, ಮೋಡ ಸರಿದ ನಂತರ ಪೂರ್ತಿಯಾಗಿ ಪ್ರಕಾಶಿಸುತ್ತಿದೆಯೋ, ಅದು “ ನಾನು ’ ಎನ್ನುವ ಶುದ್ಧ ಪ್ರಜ್ನೆ ಅದು ಬ್ರಹ್ಮನ್. ಈ ’ ನಾನು” ಎಂಬುದನ್ನು ಯಾವ ಯೋಗಿಯು ಸದಾ ವೀಕ್ಷಿಸುತ್ತಾನೋ, ಧ್ಯಾನಿಸುತ್ತಾನೋ ಅಂತಹವನು ಜ್ನಾನಿ. ಅಂತಹವನು ಗುರು ಆಗಲು ಅರ್ಹನು. ಅಂತಹ ಗುರುವೇ ’ಬ್ರಹ್ಮನ್” ಇದು ನನ್ನ ನಿರ್ಣಾಯಕ ಅಭಿಪ್ರಾಯ- ಮನೀಷಾ ಮಮ.

’ನಾನು” ಎನ್ನುವ ಶುದ್ಧ ಪ್ರಜ್ನೆಯ ಅಥವಾ ಆತ್ಮನ  ಬೆಳಕಿನಿಂದ ನಾವು ಬೆಳಗುತ್ತಿದ್ದರೂ ಅಜ್ನಾನವೆಂಬ ಮೋಡ ನಮ್ಮನ್ನಾವರಿಸಿ ಆ ಬೆಳಗನ್ನು ನಾವು ಪೂರ್ಣವಾಗಿ ಕಾಣಲಾಗುತ್ತಿಲ್ಲ ಎನ್ನಲು ಮೋಡ ಮತ್ತು ಸೂರ್ಯನ ರೂಪಕೋಕ್ತಿಯನ್ನು ಭಗವಾನ್ ಶಂಕರರು ಉಪಯೋಗಿಸಿಕೊಂಡಿದ್ದಾರೆ.

ಈ ಶ್ಲೋಕವು ನಾಲ್ಕನೇ ಮಹಾವಾಕ್ಯ “ ಅಯಂ ಆತ್ಮಾ ಬ್ರಹ್ಮ” ಎಂಬುದನ್ನು ಪ್ರತಿಪಾದಿಸುತ್ತಿದೆ.

ಈ ಮಹಾವಾಕ್ಯವು ಮಾಂಡೂಕ್ಯ ಉಪನಿಷತ್ತಿನ ಎರಡನೇ ಶ್ಲೋಕದಲ್ಲಿ ಇದೆ. ಅಥರ್ವಣ ವೇದಕ್ಕೆ ಸೇರಿದ ಮಾಂಡೂಕ್ಯ ಉಪನಿಷತ್ ಕೇವಲ ಹನ್ನೆರಡು ಶ್ಲೋಕಗಳನ್ನು ಮಾತ್ರವೇ ಒಳಗೊಂಡಿದ್ದು ಅತ್ಯಂತ ಚಿಕ್ಕ ಉಪನಿಷತ್ ಎಂದೇ ತಿಳಿಯಲಾಗಿದೆ.

ಮಾಂಡೂಕ್ಯ ಉಪನಿಷತ್ತಿನ ಈ ಹನ್ನೆರಡೂ ಶ್ಲೋಕಗಳ ಭಾವಾರ್ಥವನ್ನು ಹೇಳದೆ ಮನೀಷಾ ಪಂಚಕಕ್ಕೆ ನೀಡುವ ವಿವರಣೆ ಅಪೂರ್ಣ ಎಂದೇ ನನ್ನ ಅನಿಸಿಕೆ.

ಓಮಿತ್ಯೇ ತದ್ ಅಕ್ಷರಂ ಇದಂ ಸರ್ವಂ ತಸ್ಯೋಪವ್ಯಾಖ್ಯಾನಂ

ಭೂತಂ ಭವದ್ ಭವಿಷ್ಯದ್ಯಿತಿ ಸರ್ವಮೋಂಕಾರ ಏವ

ಯಚ್ಚಾನ್ಯತ್ ತ್ರಿಕಾಲಾತೀತಂ ತದ್ಪ್ಯೋಂಕಾರ ಏವ.          ೧

ಬ್ರಹ್ಮಾಂಡದಲ್ಲಿ ಕಾಣುವ ಎಲ್ಲವೂ ಈ, “ಓಂ” ಎಂಬ ಅವಿನಾಶಿಯಾದ ಅಕ್ಷರವೇ  ಆಗಿದೆ. ಓಂ ಎಂಬ ಶಬ್ಧವೇ ಆಗಿದೆ.ಏನಾಗಿದೆ, ಏನಾಗುತ್ತಿದೆ ಏನಾಗಬಹುದು ಎನ್ನುವ ಎಲ್ಲವೂ ಈ, “ಓಂ” ಎಂಬ ಸತ್ಯವೇ ಆಗಿದೆ. ಭೂತ ವರ್ತಮಾನ ಭವಿಷ್ಯತ್ ಕಾಲವೂ ಸೇರಿದಂತೆ  ಈ ಎಲ್ಲ್ಲ ಕಾಲಗಳನ್ನೂ  ಮೀರಿ, ಅದರಿಂದ ಆಚೆಗೂ ಇರುವ ಸತ್ಯವೂ “ಓಂ” ಶಬ್ಧವೇ  ಆಗಿದೆ.

ಸರ್ವಂ ಹ್ಯೇತದ್ ಬ್ರಹ್ಮಾಯಮಾತ್ಮಾ ಬ್ರಹ್ಮ

ಸೋsಯಮಾತ್ಮಾ ಚತುಷ್ಪಾತ್ ೨

ಇವೆಲ್ಲವೂ ಸತ್ಯವಾಗಿಯೂ ಬ್ರಹ್ಮವೇ. ಆತ್ಮವು ಸಹಾ ಬ್ರಹ್ಮವೇ. ಈ ಆತ್ಮನು ಚತುಶ್ಪಾತ್ ಅಂದರೆ ನಾಲ್ಕು ಪಾದಗಳನ್ನು ಉಳ್ಳವನು ಎಂದು ಅರ್ಥಮಾಡಿಕೊಳ್ಳದೆ, ಈ ಅತ್ಮನನ್ನು ನಾಲ್ಕು ಹಂತಗಳಲ್ಲಿ ಅರಿಯಬೇಕು ಎಂದು ಅರ್ಥ ಮಾಡಿಕೊಳ್ಳಬೇಕು.

ಜಾಗರಿತಸ್ಥಾನೋ ಬಹಿಷ್ಪ್ರಜ್ನಃ ಸಪ್ತಾಂಗ

ಏಕೋನವಿಂಶತಿಮುಖಃ ಸ್ಥೂಲಭುಗ್ವೈಶ್ವಾನರಃ

ಪ್ರಥಮಃ ಪಾದಃ ೩

ವೈಶ್ವಾನರ ಎನ್ನುವುದು ಮೊದಲ ಹಂತ. ಜಾಗೃತಾವಸ್ಥೆ ಇದರ ಕ್ಷೇತ್ರ.

ಇದರ ಪ್ರಜ್ನೆಯು ಬಹಿರ್ಮುಖವಾಗಿರುವಂತಾದ್ದು ಅಂದರೆ ಬಹಿರ್ಮುಖ ಪ್ರಜ್ನೆ . ಇದಕ್ಕೆ ಏಳು ಕಾಲುಗಳು,ಹತ್ತೊಂಬತ್ತು ಬಾಯಿಗಳಿದ್ದು ಇದು ಭೌತಿಕ ವಸ್ತುಗಳಿಂದ ಆನಂದ ವನ್ನು, ಸಂತೋಷವನ್ನು ಪಡೆಯುತ್ತದೆ.  

ಅಗ್ನಿ, ಕಣ್ಣುಗಳು, ದಿಕ್ಕುಗಳು, ವಾಕ್ಕು,ವಾಯು, ಹೃದಯ ಮತ್ತು ಪಾದಗಳು ಇವು ಏಳು ಅಂಗಗಳಾದರೆ,  ಕಿವಿ, ಚರ್ಮ, ಕಣ್ಣು, ನಾಲಿಗೆ,ಮೂಗು ಎಂಬ ಐದು ಜ್ನಾನೇಂದ್ರಿಯಗಳು, ವಾಕ್ ಪಾಣಿ ಪಾದ ಉಪಸ್ಥ ಪಾಯು ಎಂಬ ಐದು ಕರ್ಮೇಂದಿಯಗಳು, ಪ್ರಾಣ, ಅಪಾನ,ವ್ಯಾನ, ಉದಾನ, ಸಮಾನ ಗಳೆಂಬ ಐದು ಪ್ರಾಣಗಳು, ಮನಸು, ಬುದ್ಧಿ, ಚಿತ್ತ ಮತ್ತು ಅಹಂಕಾರ ಎಂಬ ನಾಲ್ಕು ಅಂತಃಕರಣಗಳು.

ಅಥ್ವಾ ಅಂತಃಕರಣ ಚತುಷ್ಟಯಗಳು. ಇವು ಹತ್ತೊಂಬತ್ತು ಬಾಯಿಗಳು.

ವೈಶ್ವಾನರ ಎನ್ನುವ ಈ ಜಾಗೃತಾವಸ್ಥೆಯ ಪ್ರಜ್ನೆಯನ್ನು ವಿರಾಟ್ ಪುರುಷನಿಗೆ ಹೋಲಿಸಿದರೆ, ಈ ವಿರಾಟ ಪುರುಷನ ತಲೆ ಅಗ್ನಿ, ಸೂರ್ಯ ಚಂದ್ರರು ಕಣ್ಣುಗಳು,ಆಷ್ಟ ಅಥವಾ ದಶ ದಿಕ್ಕುಗಳು ಈ ವಿರಾಟ್ ಪುರುಷನ ಕಿವಿಗಳು, ವೇದಗಳು ಈ ಪುರುಷನ ವಾಕ್ಕು, ವಾಯುವು ಪ್ರಾಣ, ಬ್ರಹ್ಮಾಂಡವೇ ಈ ಪುರುಷನ ಹೃದಯ, ಪಾದಗಳು ಈ ಭೂಮಿ. ಜಾಗೃತಾವಸ್ಥೆಯ ದೃಷ್ಟಿಕೋನದಲ್ಲಿ ಇದು ವಿಶ್ವವ್ಯಾಪಿಯಾದ ಆತ್ಮ. ಅದು ವೈಶ್ವಾನರ. ಇದು ವಿರಾಟ್. ಈ ವಿರಾಟ್ ಪುರುಷನನ್ನು ಕುರಿತೇ ಪುರುಷ ಸೂಕ್ತವನ್ನು ಹೇಳಿರುವುದು.ನಾವು ಇದನ್ನು ಬ್ರಾಹ್ಮಣ ತಲೆ, ಕ್ಷತ್ರಿಯ ಬಾಹುಗಳು, ಹೊಟ್ಟೆ ವೈಶ್ಯ, ಎಲ್ಲಕ್ಕೂ ಕಡೆಯಾದ ಕಾಲು ಶೂದ್ರ ಎಂದು ನಮಗೆ ಹೇಗೆ ಬೇಕೋ ಹಾಗೆ ಅರ್ಥೈಸಿ ಇಡೀ ಸಮಾಜದಲ್ಲಿ ಅಸಮಾನತೆಯನ್ನು ತರುವಲ್ಲಿ ಯಶಸ್ವಿಯಾಗಿದ್ದೇವೆ. ಇದಕ್ಕಿಂತ ದುಃಖಕರವಾದ ಸಂಗತಿ ಮತ್ತೊಂದು ಇರಲಾರದು.

ಜಾಗ್ರತಾವಸ್ಥೆಯ ಈ ವಿರಾಟ್ ಪುರುಷನ ಏಳು ಅಂಗಗಳೇನೋ ಸರಿ ಆದರೆ ಈ ಹತ್ತೊಂಬತ್ತು ಬಾಯಿಗಳು ಏಕೆ ಎನ್ನುವ ಪ್ರಶ್ನೆ ಏಳುವುದು ಸಹಜ.

ಬಾಯಿಯಿಂದ ಆಗುವ ಕೆಲಸಗಳು ಎರಡು, ಒಂದು ಮಾತಾಡುವುದು ಅಂದರೆ ವಾಕ್. ಇದನ್ನು ಈ ಹಿಂದೆ ಹೇಳಿದ ಏಳು ಅಂಗಗಳಲ್ಲಿ ಸೇರಿಸಲಾಗಿದೆ. ಎರಡನೆಯದು ಆಹಾರದ ಭಕ್ಷಣೆ, ಆ ಆಹಾರವನ್ನು ದೇಹವು ಸ್ವೀಕರಿಸಿ, ಆ ಆಹಾರ ಹೇಗಿದೆಯೋ ಹಾಗೆ ನಮ್ಮೊಳಗೆ ಜೀರ್ಣಿಸಿಕೊಳ್ಳುತ್ತೇವೆ. ಸರಿಯಾಗಿ ಯೋಚಿಸಿದರೆ, ಅರ್ಥ ಮಾಡಿಕೊಂಡರೆ ಮೇಲೆ ಹೇಳಿರುವ ಐದು ಜ್ನಾನೇಂದಿಯಗಳು, ಐದು ಕರ್ಮೇಂದ್ರಿಯಗಳು, ಐದು ಪ್ರಾಣಗಳು ಮತ್ತು ಅಂತಃಕರಣ ಚತುಷ್ಟಯಗಳಾದ ಮನಸ್ಸು ಬುದ್ಧಿ ಚಿತ್ತ ಅಹಂಕಾರ ಈ ಹತ್ತೊಂಬತ್ತು ಸಹಾ ಬಾಯಿಗಳೇ.  ಈ ಹತ್ತೊಂಬತ್ತು ಬಾಯಿಗಳಿಂದ ನಾವು ಗ್ರಹಿಸುವುದೆಲ್ಲವೂ ಆಯಾಯ ಬಾಯಿಗೆ ಆಹಾರಗಳೇ. ಕಣ್ಣಿನ ಮೂಲಕ ಪಡೆಯುವ ನೋಡುವಂತಹ ಆಹಾರ, ಕಿವಿಯಿಂದ ಕೇಳುವಂತಹ ಆಹಾರ ಹೀಗೆ ಹತ್ತೊಂಬತ್ತು ಬಾಯಿಗಳಿಂದಲೂ ಸದಾ ಆಹಾರ ಒದಗುತ್ತಲೇ ಇರುತ್ತದೆ. ಇವನ್ನು ಸ್ವೀಕರಿಸಿ ಅದು ಹೇಗಿದೆಯೋ ಹಾಗೆಯೇ ಜೀರ್ಣಿಸಿಕೊಳ್ಳುವುದೂ ಆಗಿಬಿಡುತ್ತದೆ, ಜಾಗೃತಾವಸ್ಥೆ ಯಲ್ಲಿರುವ ವೈಶ್ವಾನರ ಎಂಬ ಪ್ರಜ್ನೆಯ ಹಂತದಲ್ಲಿ.  ಇದನ್ನು ಇನ್ನು ಸ್ವಲ್ಪ ವಿವರಿಸಬೇಕೆಂದರೆ, ಆಹಾರ ಶುದ್ಧೌ ಸತ್ವ ಶುದ್ಧಿಃ ಎನ್ನುತ್ತದೆ ಛಾಂದೋಗ್ಯ ಉಪನಿಷತ್. .ಶುದ್ಧ ವಾದ ಆಹಾರದಿಂದ ಶುದ್ಧವಾದ ಸತ್ವವು ಒದಗುತ್ತದೆ ಎಂದು ಅರ್ಥ. ಹಾಗೆಂದರೆ ಹಾಲು, ಹಣ್ಣು, ಇಂತಹ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸುತ್ತಾ, ಇನ್ನಿತರ ಬಾಯಿಗಳಾದ ಕಣ್ಣಿನಿಂದ ಅಸಹ್ಯವಾದುದನ್ನು ನೋಡುತ್ತಾ, ಕಿವಿಯಿಂದ ಕೆಟ್ಟದ್ದನ್ನು ನೋಡುತ್ತಾ, ಮನಸ್ಸಿನಿಂದ ಕೆಟ್ಟಯೋಚನೆಗಳನ್ನು ಮಾಡುತ್ತಾ ಹೀಗೆ ಎಲ್ಲಾ ಹತ್ತೊಂಬತ್ತು ಬಾಯಿಗಳಿಂದ ಕೆಟ್ಟ ಆಹಾರವನ್ನೇ ಸೇವಿಸುತ್ತಾ ಇದ್ದರೆ ಸತ್ವ ಶುದ್ಧಿ ಹೇಗೆ ಸಾಧ್ಯ? ಜಾಗೃತಾವಸ್ಥೆಯಲ್ಲಿರುವ ವೈಶ್ವಾನರ ಎಂಬ ಪ್ರಜ್ನೆಯ ಅಂಗಗಳು ಮತ್ತು ಬಾಯಿಗಳು ಅರ್ಥವಾಗಿದೆ ಎಂದು ಭಾವಿಸುತ್ತೇನೆ.

ಸ್ವಪ್ನಸ್ಥಾನೋsನ್ತಃ ಪ್ರಜ್ನಃ ಸಪ್ತಾಂಗ ಏಕೋನವಿಂಶತಿಮುಖಃ

ಪ್ರವಿವಿಕ್ತಭುಕ್  ತೈಜಸೋ ದ್ವಿತೀಯಃ ಪಾದಃ                          ೪

ತೈಜಸ ಎನ್ನುವುದು ಎರಡನೆಯ ಹಂತ. ಸ್ವಪ್ನಾವಸ್ಥೆ ಇದರ ಕ್ಷೇತ್ರ.

ಇದರ ಪ್ರಜ್ನೆಯು ಅಂತಃರ್ಮುಖವಾಗಿರುವಂತಾದ್ದು ಅಂದರೆ ಅಂತಃರ್ಮುಖ ಪ್ರಜ್ನೆ . ಇದಏಳು ಕಾಲುಗಳು,ಹತ್ತೊಂಬತ್ತು ಬಾಯಿಗಳಿದ್ದು ಇದು ಸೂಕ್ಷ್ಮ ವಸ್ತುಗಳಿಂದ ಆನಂದ ವನ್ನು ಪಡೆಯುತ್ತದೆ. ಈ ಕಾಲು ಮತ್ತು ಬಾಯಿಗಳ ಬಗ್ಗೆ ಇದೀಗಷ್ಟೆ ಹೇಳಿದೆ.

ತೈಜಸ ಎನ್ನುವ ಸ್ವಪ್ನಾವಸ್ಥೆಯ ಎರಡನೆಯ ಹಂತಕ್ಕೂ ಮತ್ತು ವೈಶ್ವಾನರ ಎಂಬ ಜಾಗೃತಾವಸ್ಥೆಯ ಮೊದಲನೆಯ ಹಂತಕ್ಕೂ ಅಷ್ಟೇನೂ ವ್ಯತ್ಯಾಸ ಕಾಣಿಸುವುದಿಲ್ಲಾ. ಮೊದಲನೆಯದು, ಬಹಿರ್ಮುಖ ಪ್ರಜ್ನೆಯಾದರೆ, ಎರಡನೆಯದು ಅಂತರ್ಮುಖ ಪ್ರಜ್ನೆ.ಇಲ್ಲಿಯೂ ಏಳು ಅಂಗಗಳು ಮತ್ತು ಹತ್ತೊಂಬತ್ತು ಬಾಯಿಗಳೇ ಇವೆ. ಇವು ಜಾಗೃತಾವಸ್ಥೆಯಲ್ಲಿ ಏನನ್ನು ಮಾಡಬಲ್ಲವೂ ಅದನ್ನೇ ಸ್ವಪ್ನಾವಸ್ಥೆಯಲ್ಲೂ ಅಂತಃರ್ಮುಖ ಪ್ರಜ್ನೆಯ ಮೂಲಕ ಮಾಡುತ್ತವೆ ಅಷ್ಟೆ. ಆದರೂ ಈ ಹಂತವು ಮೊದಲ ಹಂತಕ್ಕಿಂತ ಮೇಲೆ ಇರುವ ಹಂತ ಎನ್ನುವುದು ಸತ್ಯ.

ಯತ್ರ ಸುಪ್ತೋಲೋ ಕಂಚನ ಕಾಮಂ ಕಾಮಯೇತ್

ನ ಕಾಂಚನ ಸ್ವಪ್ನಂ ಪಶ್ಯತಿ ತತ್ಸುಷುಪ್ತಂ

ಸುಷುಪ್ತಸ್ಥಾನ ಏಕೀಭೂತಃ ಪ್ರಜ್ನಾನಘನ ಏವಾನಂದಮಯೋ

ಹ್ಯಾನಂದಾಭುಕ್ ಚೇತೋಮುಖಃ ಪ್ರಜ್ನಾಸ್ತೃತೀಯ ಪಾದಃ                 ೫

ಮೂರನೆಯ ಹಂತವು  ಪ್ರಜ್ನಾ ಎಂದು ಕರೆಯಲ್ಪಟ್ಟಿದೆ. ಇದು ಸುಷುಪ್ತಾವಸ್ಥೆ ಅಂದರೆ ಆಳವಾದ ನಿದ್ರೆ. ಈ ಸ್ಥಿತಿಯಲ್ಲಿ  ಜೀವಿಯು  ವಿಭಜಿಸಲಾಗದ, ಭೇದಕಲ್ಪಿಸಲಾಗದ ಬ್ರಹ್ಮಾನಂದದ ಪ್ರಜ್ನಾನಘನವಾಗುತ್ತದೆ. ಪ್ರಜ್ನೆಯೇ ಈ ಜೀವಿಯ ಬಾಯಿ ಆಗುತ್ತದೆ.

ಏಷ ಸರ್ವೇಶ್ವರಃ ಏಷ ಸರ್ವಜ್ನಃ ಏಷೋಂತರ್ಯಾಮ್ಯೇಷ

ಯೋನಿಃ ಸರ್ವಸ್ಯ ಪ್ರಭಾವಾಪ್ಯಾಯೌ ಹಿ ಭೂತಾನಾಂ                   ೬

ಇದು ಅಂದರೆ ಪ್ರಜ್ನೆಯು, ಎಲ್ಲದರ ಎಲ್ಲವುಗಳ ಒಡೆಯ. ಸರ್ವಜ್ನ, ಅಂತರ್ಯಾಮಿ, ಎಲ್ಲದರ ಮೂಲ. ಇದು ಎಲ್ಲದರ, ಎಲ್ಲ ಜೀವಿಗಳ  ಆರಂಭ ಮತ್ತು ಕೊನೆ. ಈ ಪ್ರಜ್ನೆ ಎಂಬ ಮೂರನೆಯ ಹಂತವು ದಿಟವಾಗಿಯೂ, ವೈಶ್ವಾನರ ಮತ್ತು ತೈಜಸ ಎಂಬ ಎರಡು ಹಂತಗಳಿಗಿಂತ ಶ್ರೇಷ್ಟವಾದದ್ದು. ಆದರೆ ಇಲ್ಲಿಯೂ ಆತ್ಮನ ಅರಿವು ಆಗಿಲ್ಲ ಎಂಬುದನ್ನು ಗಮನಿಸಬೇಕು.

ನಾನ್ತಃ ಪ್ರಜ್ನಾಂ ನ ಬಹಿಷ್ಪ್ರಜ್ನಾಂ ನೋಭಯತಃ ಪ್ರಜ್ನಾಂ ನ

ಪ್ರಜ್ನಾನಘನಂ ನ ಪ್ರಜ್ನಮ್ ನಾಪ್ರಜ್ನಂ

ಅದೃಷ್ಟಂವ್ಯವಹಾರ್ಯಾಂಗ್ರಾಹ್ಯಾಂಲಕ್ಷಣಾಮಚಿನ್ತ್ಯಮ್-

ವ್ಯಪದೇಶಯಮೇಕಾತ್ಮಪ್ರತ್ಯಯಸಾರಂ ಪ್ರಪಂಚೋಪಶಮಂ

ಶಾಂತಂ ಶಿಮಮದ್ವೈತಂ ಚತುರ್ಥಂ

ಮನ್ಯನ್ತೇ ಸ ಆತ್ಮಾ ಸ ವಿಜ್ನೇಯಃ                                       ೭

ಅಂತಃರ್ಮುಖ  ಪ್ರಜ್ನೆಯೂ ಆಗಿಲ್ಲದ, ಬಹಿರ್ಮುಖ ಪ್ರಜ್ನೆಯೂ ಆಗಿಲ್ಲದ, ಅಥವಾ ಎರಡೂ ಒಟ್ಟಿಗೆ ಇರುವಂತಾದ್ದೂ ಆಗಿಲ್ಲದ, ತಾಟಸ್ಥ್ಯವೂ ಅಲ್ಲದ ಪ್ರಜ್ನೆಯಾಗಿರುವುದು ಯಾವುದೋ, ಯಾವುದು ಕಣ್ಣಿಗೆ  ಕಾಣದಿರುವುದೋ, ಅನಿರ್ವಚನೀಯವಾಗಿರುವುದೋ, ಅಮೂರ್ತವಾಗಿರುವುದೋ, ವೈಶಿಷ್ಟ್ಯ ರಹಿತವಾಗಿರುವುದೋ, ಅಚಿಂತ್ಯವಾದದ್ದೋ, ವಿವರಿಸಲಾಗದ್ದೋ, ಶಾಂತವಾಗಿರುವಂತಾದ್ದೋ, ಸಂಪೂರ್ಣ ತಟಸ್ಥವಾದದ್ದೋ, ಆನಂದವನ್ನು ನೀಡುವಂತಾದ್ದೋ ಅದು ನಾಲ್ಕನೆಯ ಹಂತ. ಇದುವೇ ಆತ್ಮ.ಇದನ್ನು ಅರಿಯಬೇಕು.

ಮೇಲಿನ  ಶ್ಲೋಕಗಳಲ್ಲಿ  ಬ್ರಹ್ಮನ್ ನನ್ನು ಅರಿಯಲು ನಾಲ್ಕು ಹಂತಗಳನ್ನು ಹೇಳಿದ್ದು ಮೊದಲನೆಯದು ವೈಶ್ವಾನರ, ಎರಡನೆಯದು ತೈಜಸ, ಮೂರನೆಯದು ಪ್ರಜ್ನಾ ಮತ್ತು ನಾಲ್ಕನೆಯ ಹಂತವೇ ಆತ್ಮ ಎಂದು ಹೇಳಲಾಗಿದೆ.   ಆತ್ಮ ವು ಬ್ರಹ್ಮಾ ಎಂಬುದನ್ನೂ ಸ್ಪಷ್ಟವಾಗಿ ಹೇಳಲಾಗಿದೆ..

ಸೋಮಯಾತ್ಮಾsಧ್ಯಕ್ಶರಮೋಂಕಾರೋsಧಿಮಾತ್ರಂ ಪಾದಾ ಮಾತ್ರಾ

ಮಾತ್ರಾಶ್ಚ ಪಾದಾ ಅಕಾರ ಉಕಾರೋ ಮಕಾರ ಇತಿ.                     ೮

ಆತ್ಮದ ಶಬ್ಧರೂಪ  ಓಂ. ಈ, ಓಂ ಎಂಬುವ ಅಕ್ಷರ ಅಥವಾ  ಉಚ್ಛಾರದ ಘಟಕಗಳು ಅಥವಾ ಅಂಶಗಳು ಮೇಲೆ ಹೇಳಿದಂತೆ ಬ್ರಹ್ಮನನ್ನು ಅರಿಯಲು ಏರಬೇಕಾದ ನಾಲ್ಕು ಹಂತಗಳ  ತದ್ರೂಪವಾಗಿದೆ.  ಅ, ಉ ಮತ್ತು ಮ ಎಂಬ ಅಂಶಗಳು ಅಥ್ವಾ ಘಟಕಗಳನ್ನು ಒಳಗೊಂಡಿರುವುದು ಅಥವಾ ಅವುಗಳಿಂದ ಉತ್ಪತ್ತಿಯಾಗಿರುವುದೇ ಓಂ ಎಂಬ ಈ ಅಕ್ಷರ, ಓಂ ಎಂಬ ಶಬ್ಧ.

ಜಾಗರಿತಸ್ಥಾನೋ ವೈಶ್ವಾನರೋsಕಾರಃ  ಪ್ರಥಮಾ

ಮಾತ್ರಾssಪ್ತೇರಾದಿಮತ್ವಾದ್ವಾಪ್ನೋತಿ ಹ ವೈ

ಸರ್ವಾನ್ಕಾಮಾದಿಶ್ವ ಭವತಿ ಯ ಏವಂ ವೇದ                      ೯

ಜಾಗೃತ ಅವಸ್ಥೆಯು ಕ್ಷೇತ್ರ ವಾಗಿರುವ ವೈಶ್ವಾನರವೇ ಮೊದಲ ಶಬ್ಧ ’ಅ” ಏಕೆಂದರೆ ಇದು ಎಲ್ಲವನ್ನೂ ವ್ಯಾಪಿಸಿರುವಂತಾದ್ದು ಹಾಗಾಗಿಯೇ ಇದೇ ಮೊದಲನೆಯದು. ಎಲ್ಲ ಅಪೇಕ್ಷಿತ ವಸ್ತುಗಳಲ್ಲಿ ವ್ಯಾಪಿಸಿರುವ ಪ್ರಜ್ನೆಯನ್ನು  ಯಾರು  ತಿಳಿದಿರುವವನೋ ಅವನೇ ಮೊದಲು. ವೈಶ್ವಾನರ ಅಂದರೆ ಏನು ಎಂಬುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ.

ಸ್ವಪ್ನಸ್ಥಾನಸ್ತೈಜಸ ಉಕಾರೋ ದ್ವಿತೀಯಾ

ಮಾತ್ರೋಕ್ತರ್ಷಾದ್ಬಯತ್ವಾದ್ವೋಕ್ತರ್ಷತಿ ಹ ವೈ

ಜ್ನಾನಸಂತತಿಂ ಸಮಾನಶ್ಚ ಭವತಿ

ನಾಸ್ಯಾಬ್ರಹ್ಮವಿತ್ಕುಲೇ ಭವತಿ ಯ ಏವಂ ವೇದ                         ೧೦

ಸ್ವಪ್ನಾವಸ್ಥೆಯು ಕ್ಷೇತ್ರ ವಾಗಿರುವ ತೈಜಸವೇ ಎರಡನೇ  ಶಬ್ಧ ’ಉ” ಏಕೆಂದರೆ ಇದು ಶ್ರೇಷ್ಟವಾದ್ದು ಮತ್ತು ಮಿಕ್ಕ ಎರಡು ಶಬ್ಧಗಳ ಗುಣವನ್ನೂ ಹೊಂದಿರುವಂತಾದ್ದು.ಮಿಕ್ಕ ಎರಡು ಶಬ್ಧಗಳು ಎಂದರೆ ಅ ಮತ್ತು ಮ.  ಇದನ್ನು ಅರಿತವನಲ್ಲಿ ಜ್ನಾನವು ಅತ್ಯುನ್ನತ ವಾಗಿ ಪ್ರವಹಿಸುತ್ತದೆ ಮತ್ತು ಇಂತಹವನ ವಂಶದಲ್ಲಿ ಹುಟ್ಟುವವರಲ್ಲಿ ಯಾರೂ ಅಜ್ನಾನಿಗಳು ಆಗಿರುವುದಿಲ್ಲ. ಎಲ್ಲರೂ ಬ್ರಹ್ಮನ್ ನ ಅರಿವು ಉಳ್ಳವರಾಗಿರುತ್ತಾರೆ. ತೈಜಸ ಎಂದರೆ ಏನು ಎಂಬ ಬಗ್ಗೆಯೂ ಈ ಹಿಂದೆ ತಿಳಿದುಕೊಂಡಿದ್ದೇವೆ.

ಸುಷುಪ್ತಸ್ಥಾನಃ ಪ್ರಜ್ನೋ ಮಕಾರಸ್ತೃತೀಯಾ ಮಾತ್ರಾ

ಮಿತೇರಪಿತೇರ್ವಾ ಮಿನೋತಿ ಹ ವಾ ಇದಂ

ಸರ್ವಮಪಿತಿಶ್ಚ ಭವತಿ ಯ ಏವಂ ವೇದ                            ೧೧

ಆಳವಾದ ನಿದ್ರೆ ಅಂದರೆ ಸುಷುಪ್ತಾವಸ್ಥೆಯು ಕ್ಷೇತ್ರವಾಗಿರುವ ಪ್ರಜ್ನೆಯೇ ಮೂರನೆಯ ಶಬ್ಧ ’ಮ” ಏಕೆಂದರೆ ಇದು ಮಾಪನ ಮತ್ತು ಇದರೊಳಗೆ ಎಲ್ಲವೂ ಪ್ರವೇಶಿಸುತ್ತವೆ. ಇದನ್ನು ಯಾರು ಅರಿಯುತ್ತಾನೋ  ಅವನು ಎಲ್ಲವನ್ನೂ ಅಳೆಯಬಲ್ಲವನಾಗುತ್ತಾನೆ ಮತ್ತು ಎಲ್ಲವೂ ಅವನೇ  ಆಗಿಬಿಡುತ್ತಾನೆ.

ಅಮಾತ್ರಶ್ಚತುರ್ಥೋsವ್ಯವಹಾರ್ಯಃ ಪ್ರಪಂಚೋಪಶಮಃ ಶಿವೋsದ್ವೈತ

ಏವಮೋಂಕಾರ ಆತ್ಮೈವ ಸಂವಿಶತ್ಯಾತ್ಮನಾತ್ಮಾನ್ ಯ ಏವಂ ವೇದ ಯ ಏವಂ ವೇದ ೧೨

ಆತ್ಮನೇ ನಾಲ್ಕನೆಯ ಹಂತ. ಅದು ಶಬ್ಧವೇ ಇಲ್ಲದ್ದು. ಮಾತಿನಲ್ಲಿ ಹೇಳಲಾಗದ್ದು, ಅವರ್ಣನೀಯವಾದ್ದು. ಆನಂದವಾದ್ದು, ಅದ್ವೈತವಾದ್ದು. ಹಾಗಾಗಿ  ಸತ್ಯವಾಗಿಯೂ ಓಂ ಎನ್ನುವ ಶಬ್ಧವೇ  ಆತ್ಮ. ಇದನ್ನು ಯಾರು ಅರಿಯುತ್ತಾನೋ ಅಂತಹವನು ಆತ್ಮನಲ್ಲಿಯೇ ಬೆರೆತು ಒಂದಾಗುತ್ತಾನೆ. ಇದನ್ನು ಅರಿತವನು ಆತ್ಮನಲ್ಲಿಯೇ ಬೆರೆತು ಒಂದಾಗಿಬಿಡುತ್ತಾನೆ.

ಮನೀಷಾ ಪಂಚಕದ ನಾಲ್ಕನೆಯ ಶ್ಲೋಕವು ಅಯಂ ಆತ್ಮಾ ಬ್ರಹ್ಮ ಎಂಬ ನಾಲ್ಕನೇ ಮಹಾವಾಕ್ಯವನ್ನು ಪ್ರತಿಪಾದಿಸಿರುವ ಬಗ್ಗೆ ತಿಳಿದುಕೊಂಡ ನಂತರ,  ಆತ್ಮಾ ಎಂಬುದರ ಸ್ವರೂಪವನ್ನು ತಿಳಿಯುವ ಸಲುವಾಗಿ ನಾವು ಮಾಂಡೂಕ್ಯ ಉಪನಿಷತ್ತಿನ ಮೊರೆಹೋಗ ಬೇಕಾಯಿತು.  ಆತ್ಮಾ ಎನ್ನುವುದರ ಮೂಲವು ಪ್ರಜ್ನೆ  ಎಂದು ತಿಳಿದುಕೊಂಡು ಹೇಗೆ  ಈ ಪ್ರಜ್ನೆಯು ಓಂ ಕಾರ ಶಬ್ಧದೊಂದಿಗೆ ಸಮೀಕರಣ ಗೊಂಡಿವೆ ಎಂಬುದನ್ನೂ ತಿಳಿದುಕೊಂಡಾಗ ಪ್ರಣವ ಎಂದು ಕರೆಯಲಾಗುವ ಓಂಕಾರ ಶಬ್ಧವೇ ಆತ್ಮ ಎಂಬ ಅರಿವಾಯಿತು. ಆತ್ಮವೇ ಬ್ರಹ್ಮ, ಆ ಅತ್ಮವೇ ಓಂಕಾರ ಎಂದಾಗ ಓಂಕಾರವೇ ಬ್ರಹ್ಮ ಎಂಬಲ್ಲಿಗೆ ಮುಟ್ಟಿದ್ದೇವೆ.  ಇನ್ನು ಈ ಆತ್ಮನ ಸಾಕ್ಷಾತ್ಕಾರವಾಗಲು ಗುರುವಿನ ಕರುಣೆ, ಅನುಗ್ರಹ ಬೇಕಷ್ಟೆ.  ಆತ್ಮ ಎಂಬುದರ ಬಗ್ಗೆ ಇಲ್ಲಿವರೆಗೆ ನೀಡಿರುವ ಎಲ್ಲ ವಿವರಣೆ, ಒಂದು ಒಳ್ಳೆಯ ಅಪರೂಪವಾದ ಸಿಹಿ ತಿನಿಸನ್ನು ತಯಾರು ಮಾಡುವ ವಿಧಾನವನ್ನು ತಿಳಿಸಿ ಬರೆದಿರುವ ಪುಸ್ತಕ ಆಗಿದೆ ಅಷ್ಟೆ. ಆ ಸಿಹಿಯನ್ನು ನಾವೇ ತಯಾರಿಸಬೇಕು, ನಂತರ ಅದರ ಸವಿಯನ್ನು ನಾವು ಸವಿಯಬೇಕು. ಅದು ಪ್ರಜ್ನಾನಂ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ತತ್ವಮ್ ಅಸಿ, ಅಯಮಾತ್ಮಾ ಬ್ರಹ್ಮ.  ಈ ಸಿಹಿ ತಿನಿಸಿನ ತಯಾರಿಕೆಗೆ ಸಾಮಗ್ರಿಗಳನ್ನು ಹೊಂದಿಸುವ ಪ್ರಕ್ರಿಯೆ ಈ ದಿನದಿಂದಲೇ, ಈ ಕ್ಷಣದಿಂದಲೇ ಆರಂಭ ಆಗಲಿ. ಗುರುಮಂಡಲ ರೂಪಿಣಿ ಶ್ರೀ ಲಲಿತಾ ಮಹಾತ್ರಿಪುರಸುಂದರಿ ನಮ್ಮನ್ನು ಅನುಗ್ರಹಿಸಲಿ.

ಈಗ ಮನೀಷಾ ಪಂಚಕದ ಐದನೆಯ ಶ್ಲೋಕವನ್ನು ನೋಡೋಣ.

ಯತ್ಸೌಖ್ಯಾಮ್ಬುಧಿಲೇಶಲೇಶತ ಇಮೇ ಶಾಕ್ರದಯೋ ನಿರ್ವೃತಾ

ಯಾಚ್ಚಿತೇ ನಿತರಾಂ ಪ್ರಶಾನ್ತಕಲನೇ ಲಬ್ಧ್ವಾ ಮುನಿರ್ನಿವೃತಃ

ಯಸ್ಮಿನ್ನಿತ್ಯಸುಖಾಮ್ಬುಧೌ   ಗಲಿತಧೀರ್ಬ್ರಹ್ಮೈವ ನ ಬ್ರಹ್ಮವಿದ್

èಯಃ ಕಶ್ಚಿತ್ಸ ಸುರೇನ್ದ್ರವನ್ದಿತಪದೋ ನೂನಂ ಮನೀಷಾ ಮಮ

ಇತಿ ಶ್ರೀಮದ್ ಶಂಕರಭಗವತಃ ಕೃತೌ ಮನೀಷಾ ಪಂಚಕಂ ಸಂಪೂರ್ಣಂ 

ಇಂದ್ರನೂ ಸೇರಿದಂತೆ ಎಲ್ಲ ದೇವತೆಗಳನ್ನು ತೃಪ್ತಿ ಪಡೆಸಲು ಅತ್ಮಾನಂದ ವೆಂಬ ಸಾಗರದ  ಸಣ್ಣ ಹನಿಗಳು ಸಾಕು ಆದರೆ ಯಾರ ಮನಸ್ಸು ತೃಪ್ತವಾಗಿದೆಯೋ, ಶಾಂತ ಸ್ಥಿತಿಯನ್ನು ತಲುಪಿದೆಯೋ ಅಂತಹ ಯೋಗಿಯು ತಣಿಯುವುದು ಸಂಪೂರ್ಣವಾಗಿ ಆತ್ಮಾನಂದದ ಸಾಗರವನ್ನೇ ಪಡೆದುಕೊಂಡಾಗ ಮಾತ್ರ. ಅಂತಹ ಯೋಗಿಯು ಬ್ರಹ್ಮ ವನ್ನು ಅರಿತವನಷ್ಟೇ ಅಲ್ಲಾ, ತಾನೇ ಬ್ರಹ್ಮ ಆಗಿಬಿಡುತ್ತಾನೆ. ಇಂತಹವರು ಅಪರೂಪ. ಇಂತಹವರ ಪಾದಪೂಜೆಯನ್ನು ದೇವತೆಗಳ ರಾಜ ಇಂದ್ರನೇ ಮಾಡುತ್ತಾನೆ. ಇದು ನನ್ನ ನಿರ್ಣಾಯಕ ನಂಬಿಕೆ. ಮನೀಷಾ ಮಮ. ಇಲ್ಲಿಗೆ ಶ್ರೀ ಮದ್ ಶಂಕರ ಭಗವತ್ಪಾದರಿಂದ ರಚಿತವಾದ ಮನೀಷಾ ಪಂಚಕಂ ಸಂಪೂರ್ಣ ವಾಯಿತು.

ನಾವು ಇಷ್ಟು ಹೊತ್ತು ಕೇಳಿದ್ದು ಶ್ರೀ ಶಂಕರ ಭಗವತ್ಪಾದರ ನಿರ್ಣಾಯಕ ನಂಬಿಕೆ,ಮನೀಷಾ ಮಮ. ಶ್ರೀ ಶಂಕರ ಭಗವತ್ಪಾದರನ್ನು ಶಂಕರರ ಪ್ರತಿರೂಪವೇ ಎಂದು ಭಾವಿಸಿ, ನಮ್ಮ ಹೃದಯ ಸಿಂಹಾಸನದಲ್ಲಿ ಕೂಡಿಸಿ ಆರಾಧಿಸುತ್ತಿರುವ ನಮ್ಮಂತಹವರಿಗೆ  ಈ ನಿರ್ಣಾಯಕ ನಂಬಿಕೆ ಬರುವುದು ಯಾವಾಗ? ಭಗವತ್ಪಾದರ ನಿರ್ಣಾಯಕ ನಂಬಿಕೆಯು ನಮ್ಮ ನಿರ್ಣಾಯಕ ನಂಬಿಕೆ ಆಗದೇ ನಮ್ಮ ಪೂಜೆ ನಮ್ಮ ಆರಾಧನೆ ಭಗವತ್ಪಾದರನ್ನು ತಲುಪುವುದಾದರೂ ಹೇಗೆ? ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ,  ಅವರ ನಿರ್ಣಾಯಕ ನಂಬಿಕೆಯೇ ನಮ್ಮ ನಿರ್ಣಾಯಕ ನಂಬಿಕೆಯೂ ಆಗುವ ಹಾಗೆ ಶ್ರೀ ಶಂಕರ ಭಗವತ್ಪಾದರು ನಮ್ಮನ್ನು ಅನುಗ್ರಹಿಸಲಿ ಎಂದು ಅವರನ್ನು ಶ್ರದ್ಧಾ ಭಕ್ತಿಗಳಿಂದ ಪ್ರಾರ್ಥಿಸುತ್ತಾ, ನನ್ನ ಗುರುಗಳು, ಗುರುಪರಂಪರೆ ಮತ್ತು ಗುರುಮಂಡಲ ರೂಪಿಣಿ ಶ್ರೀ ಲಲಿತಾ ಮಹಾತ್ರಿಪುರ ಸುಂದರಿಯು ಈ ಅಲ್ಪಜ್ನ ನಾದ ನನ್ನಿಂದ ಹೇಳಿಸಿರುವ ಈ ಮನೀಷಾ ಪಂಚಕದ ವಿವರಣೆ ಯನ್ನು ಅವರ ಪಾದಪದ್ಮಗಳಲ್ಲಿಯೇ ಸಂಪೂರ್ಣ ಶರಣಾಗತಿಯೊಂದಿಗೆ ಅರ್ಪಿಸುತ್ತಿದ್ದೇನೆ.

ಓಂ ಪೂರ್ಣಮದಃ ಪೂರ್ಣಮಿದಂ

ಪೂರ್ಣಾತ್ ಪೂರ್ಣಮದುಚ್ಯತೇ

ಪೂರ್ಣಸ್ಯ ಪೂರ್ಣಮಾದಾಯ

ಪೂರ್ಣಾಮೇವಾವಶಿಷ್ಯತೇ

ಓಂ ಅದು ಪೂರ್ಣ, ಇದು ಪೂರ್ಣ, ಪೂರ್ಣದಿಂದಲೇ ಪೂರ್ಣದ ಉದಯ

ಪೂರ್ಣದಿಂದ ಪೂರ್ಣವನ್ನು ತೆಗೆದರೆ ಉಳಿಯುವುದೂ ಪೂರ್ಣ

ಓಂ ಶಾಂತಿಃ ಶಾಂತಿಃ ಶಾಂತಿಃ

#

No responses yet

    Leave a Reply

    Your email address will not be published. Required fields are marked *